July 15, 2026

ಭಟ್ಕಳ: ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ; ಮಂಕಿ ಪಿಎಸ್‌ಐ ಅಭಿನಂದನ್ ಗೌಡ ಬಂಧನ

ಭಟ್ಕಳ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪದಡಿ ಉತ್ತರ ಕನ್ನಡ ಜಿಲ್ಲೆಯ ಮಂಕಿ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ (ಪಿಎಸ್‌ಐ) ಅಭಿನಂದನ್ ಗೌಡ ಅವರನ್ನು ಭಟ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಯಬೇಕಾದ ಅಧಿಕಾರಿಯೇ ಇಂತಹ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವುದು ಸಾರ್ವಜನಿಕ ವಲಯ ಹಾಗೂ ಪೊಲೀಸ್ ಇಲಾಖೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಪ್ರಕರಣದ ಹಿನ್ನೆಲೆ:

ಜುಲೈ 4ರಂದು 16 ವರ್ಷದ ಅಪ್ರಾಪ್ತ ಬಾಲಕಿ ನೀಡಿದ ದೂರಿನನ್ವಯ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ (POCSO) ಕಾಯ್ದೆ ಸೇರಿದಂತೆ ವಿವಿಧ ಕಾನೂನು ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನ ವಿವರಗಳ ಪ್ರಕಾರ, ಬಾಲಕಿ ಅಪ್ರಾಪ್ತಳಾಗಿದ್ದಾಳೆ ಎಂದು ತಿಳಿದಿದ್ದರೂ ಆರೋಪಿತ ಪಿಎಸ್‌ಐ ದೂರವಾಣಿ ಕರೆ, ಚಾಟ್ ಹಾಗೂ ಆರ್ಥಿಕ ಸಹಾಯದ ಆಮಿಷ ಒಡ್ಡಿ ಆಕೆಯ ವಿಶ್ವಾಸ ಗಳಿಸಿದ್ದಾನೆ ಎನ್ನಲಾಗಿದೆ.
ಬಳಿಕ ಮೇ 31ರಂದು ಹೊನ್ನಾವರದ ಅಪ್ಪರಕೊಂಡದಲ್ಲಿ ಸಂಬಂಧಿಕರೊಬ್ಬರ ಮಗಳ ಹುಟ್ಟುಹಬ್ಬದ ಕಾರ್ಯಕ್ರಮವಿದೆ ಎಂದು ನಂಬಿಸಿ ಬಾಲಕಿಯನ್ನು ಹೊನ್ನಾವರಕ್ಕೆ ಕರೆಸಿಕೊಂಡಿದ್ದಾನೆ. ಅಲ್ಲಿಂದ ತನ್ನದೇ ಕಾರಿನಲ್ಲಿ ಭಟ್ಕಳಕ್ಕೆ ಕರೆತಂದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಲಾಡ್ಜ್‌ನಲ್ಲಿ ದೌರ್ಜನ್ಯ, ಸಿಸಿಟಿವಿ ಆಧಾರದ ಮೇಲೆ ಬಂಧನ:

ಭಟ್ಕಳದ ಮುರಿದ ಕಟ್ಟೆ ವಿವಾದದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯ ವಸತಿಗಾಗಿ ರಾಯಲ್ ಓಕ್ ಲಾಡ್ಜ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಇದೇ ಅವಧಿಯಲ್ಲಿ ಆರೋಪಿತ ಅಧಿಕಾರಿ ಸಂಜೆ ಸುಮಾರು 6:30ರ ಸುಮಾರಿಗೆ ಬಾಲಕಿಯನ್ನು ರಾಯಲ್ ಓಕ್ ಲಾಡ್ಜ್‌ಗೆ ಕರೆದೊಯ್ದು, ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಭಟ್ಕಳ ನಗರ ಠಾಣೆ ಪೊಲೀಸರು, ಲಾಡ್ಜ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಲಭ್ಯವಾದ ಮಹತ್ವದ ಸಾಕ್ಷ್ಯಗಳ ಆಧಾರದ ಮೇಲೆ ಪಿಎಸ್‌ಐ ಅಭಿನಂದನ್ ಗೌಡ ಅವರನ್ನು ವಶಕ್ಕೆ ಪಡೆದು, ತದನಂತರ ಅಧಿಕೃತವಾಗಿ ಬಂಧಿಸಿದ್ದಾರೆ.

ಇಲಾಖೆಗೆ ಮುಜುಗರ:

ಆರೋಪಿತ ಅಭಿನಂದನ್ ಗೌಡ ಅವರು ಮೂಲತಃ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನವರಾಗಿದ್ದು, 2021ನೇ ಬ್ಯಾಚ್‌ನ ಪಿಎಸ್‌ಐ ಆಗಿದ್ದಾರೆ. ಇತ್ತೀಚೆಗಷ್ಟೇ ಮಂಕಿ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ಆಗಿ ಇವರು ವರ್ಗಾವಣೆಯಾಗಿದ್ದರು.
ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಯ ಮೇಲೆಯೇ ಇಂತಹ ಗಂಭೀರ ಆರೋಪ ಕೇಳಿಬಂದಿರುವುದು ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ಉಂಟುಮಾಡಿದ್ದು, ಆರೋಪಿತ ಅಧಿಕಾರಿಯ ವಿರುದ್ಧ ಇಲಾಖಾ ಮಟ್ಟದಲ್ಲೂ ಕಠಿಣ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಭಟ್ಕಳ ನಗರ ಠಾಣೆ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

About The Author

error: Content is protected !!