
ಭಟ್ಕಳ/ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ ಬೀಚ್ ಸಮೀಪದ ಏಕಮುಖ (ಒನ್‌ವೇ) ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ಸ್ಕೂಟರ್, ಬೈಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಭಟ್ಕಳ ಮೂಲದ ಯುವಕ ಹಾಗೂ ಸ್ಕೂಟರ್ ಸವಾರ ಸೇರಿ ಇಬ್ಬರು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.
ಮೃತರನ್ನು ಭಟ್ಕಳ ತಾಲೂಕಿನ ಸಾತುಮನೆ ಸಣ್ಣಬಾವಿ ನಿವಾಸಿ ದೀಪಕ ನಾಗಪ್ಪ ನಾಯ್ಕ ಮತ್ತು ಹಡವು ನಿವಾಸಿ ಪೆಟ್ರಿಕ್ ವಾಜ್ (63) ಎಂದು ಗುರುತಿಸಲಾಗಿದೆ.

ಅಪಘಾತದ ಹಿನ್ನೆಲೆ:
ದೀಪಕ ನಾಗಪ್ಪ ನಾಯ್ಕ ಅವರು ಬೈಂದೂರಿನಿಂದ ಕುಂದಾಪುರದ ಕಡೆಗೆ ರಾಷ್ಟ್ರೀಯ ಹೆದ್ದಾರಿ 66ರ ಪೂರ್ವ ಬದಿಯ ಏಕಮುಖ ರಸ್ತೆಯಲ್ಲಿ ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ತ್ರಾಸಿಯಿಂದ ಮರವಂತೆ ಕಡೆಗೆ ಅದೇ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ (ರಾಂಗ್ ಸೈಡ್) ಸ್ಕೂಟರ್ ಚಲಾಯಿಸಿಕೊಂಡು ಬಂದ ಪೆಟ್ರಿಕ್ ವಾಜ್ ಅವರು, ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬೈಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.
ಆಸ್ಪತ್ರೆಗೆ ಸಾಗಿಸುವಾಗ ಸಾವು:
ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳ ಸವಾರರು ರಸ್ತೆಗೆ ಎಸೆಯಲ್ಪಟ್ಟಿದ್ದು, ದೀಪಕ ಅವರ ತಲೆ ಹಾಗೂ ಮುಖಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಸ್ಕೂಟರ್ ಸವಾರ ಪೆಟ್ರಿಕ್ ವಾಜ್ ಹಾಗೂ ಅವರ ಹಿಂಬದಿ ಸವಾರರಾಗಿದ್ದ ಪ್ಲೇನ್ಸೀಟಾ ಅವರಿಗೂ ತೀವ್ರ ಗಾಯಗಳಾಗಿದ್ದವು.
ಘಟನಾ ಸ್ಥಳದಲ್ಲಿದ್ದ ಗಂಗೊಳ್ಳಿಯ ಆಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ಅವರು ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ದೀಪಕ ನಾಗಪ್ಪ ನಾಯ್ಕ ಅವರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಪೆಟ್ರಿಕ್ ವಾಜ್ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಹ ಮೃತಪಟ್ಟಿದ್ದಾರೆ.

ಪ್ರಕರಣ ದಾಖಲು:
ಅಪಘಾತದ ಸಮಯದಲ್ಲಿ ತ್ರಾಸಿ ಬೀಚ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗೃಹರಕ್ಷಕ ದಳದ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

More Stories
ಹೆದ್ದಾರಿ ಅಪಘಾತಕ್ಕೆ ಸ್ಕೂಟಿ ಸವಾರ ಬಲಿ: ಅವೈಜ್ಞಾನಿಕ ವಿನ್ಯಾಸ ಆರೋಪಿಸಿ ಭಟ್ಕಳದಲ್ಲಿ ಸಾರ್ವಜನಿಕರ ಆಕ್ರೋಶ, ಪ್ರತಿಭಟನೆ
ಲಂಡನ್ನಲ್ಲಿ ‘ಅಡ್ವಾನ್ಸ್ಡ್ ನಾಟಿಕಲ್ ಸೈನ್ಸ್’ ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ ಭಟ್ಕಳದ ಹೆಮ್ಮೆಯ ಯುವಕ ಪ್ರಜ್ವಲ್ ನಾಯ್ಕ
ಬೈಲೂರು ಕ್ಲಸ್ಟರ್ನ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮುಂಬೈನ ಅನಿರುದ್ಧ ಬಾಪು ಟ್ರಸ್ಟ್ನಿಂದ ಉಚಿತ ನೋಟ್ಬುಕ್ ವಿತರಣೆ