ಭಟ್ಕಳ/ಮುರುಡೇಶ್ವರ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕಾರಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಕೊಲೆ ಮಾಡಲು ಯತ್ನಿಸಿದ ಗಂಭೀರ ಆರೋಪದಡಿ ಯುವಕನೊಬ್ಬನ ವಿರುದ್ಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾವಳ್ಳಿ-2ರ ಕನ್ನಡ ಶಾಲೆ ನಿವಾಸಿ, ಖಾಸಗಿ ಸಂಸ್ಥೆಯೊಂದರಲ್ಲಿ ರೂಮ್ ಬಾಯ್ ಆಗಿ ಕೆಲಸ ಮಾಡುತ್ತಿರುವ ಗಣೇಶ ಜಯಂತ ನಾಯ್ಕ (24) ಅವರು ನೀಡಿದ ದೂರಿನ ಮೇರೆಗೆ ದೀವಗಿರಿ (ಮಾವಳ್ಳಿ-2) ನಿವಾಸಿ ಹೃತೀಕ ಮಂಜುನಾಥ ನಾಯ್ಕ (26) ಎಂಬಾತನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಘಟನೆಯ ವಿವರ:
ದೂರಿನ ವಿವರಗಳ ಪ್ರಕಾರ, ಆರೋಪಿ ಹೃತೀಕ ಈ ಹಿಂದಿನಿಂದಲೂ ಗಣೇಶ ಅವರೊಂದಿಗೆ ವೈಷಮ್ಯ ಹೊಂದಿದ್ದನು ಎನ್ನಲಾಗಿದೆ. ಜುಲೈ 3ರಂದು ಮಧ್ಯಾಹ್ನ ಸುಮಾರು 2:20ರ ಸುಮಾರಿಗೆ ಗಣೇಶ ಅವರು ತಮ್ಮ ಕಾರಿನಲ್ಲಿ (KA-47/N-3579) ಬ್ಯಾಂಕಿಗೆ ತೆರಳುವ ಸಲುವಾಗಿ ಕನ್ನಡ ಶಾಲೆ ಕಡೆಯಿಂದ ಬಸ್ತಿ ಮಾರ್ಗವಾಗಿ ಮುರುಡೇಶ್ವರದ ಕಡೆಗೆ ಬರುತ್ತಿದ್ದರು.
ಈ ವೇಳೆ ಬಸ್ತಿ ರಸ್ತೆಯ ಪಿ.ಎನ್.ಇ. ಶೋರೂಂ ಸಮೀಪ ಎದುರಿಗೆ ಬಂದ ಆರೋಪಿ ಹೃತೀಕ, ತಾನು ಚಲಾಯಿಸುತ್ತಿದ್ದ ಕಾರನ್ನು (KA-47/M-5725) ಏಕಾಏಕಿ ಗಣೇಶ ಅವರ ಕಾರಿನ ಕಡೆಗೆ ಅತಿ ವೇಗವಾಗಿ ನುಗ್ಗಿಸಿ ಡಿಕ್ಕಿ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.

ನಿಯಂತ್ರಣ ತಪ್ಪಿ ಕಾಂಪೌಂಡ್‌ಗೆ ಗುದ್ದಿದ ಕಾರು:
ಆರೋಪಿಯ ಕಾರಿನ ಡಿಕ್ಕಿಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಗಣೇಶ ಅವರು ತಮ್ಮ ಕಾರಿನ ವೇಗವನ್ನು ಹೆಚ್ಚಿಸಿ ಮುಂದೆ ಸಾಗಲು ಯತ್ನಿಸಿದ್ದಾರೆ. ಆದರೆ, ಆರೋಪಿ ಹೃತೀಕ ಮತ್ತೊಮ್ಮೆ ತನ್ನ ಕಾರಿನಿಂದ ಗಣೇಶ ಅವರ ಕಾರಿನ ಹಿಂಭಾಗಕ್ಕೆ ಜೋರಾಗಿ ಡಿಕ್ಕಿ ಹೊಡೆದಿದ್ದಾನೆ. ಇದರ ರಭಸಕ್ಕೆ ಗಣೇಶ ಅವರ ಕಾರು ನಿಯಂತ್ರಣ ತಪ್ಪಿ, ರಸ್ತೆ ಬದಿಯಲ್ಲಿದ್ದ ಮಾವಳ್ಳಿ-2ರ ಚಂದ್ರಹಿತ್ತಲ ನಿವಾಸಿ ಮಾರ್ಟಿನ್ ಪ್ರಾನ್ಸಿಸ್ ಲೂಯಿಸ್ ಎಂಬುವವರ ಮನೆಯ ಕಾಂಪೌಂಡ್ ಗೋಡೆಗೆ ಸೀದಾ ಹೋಗಿ ಗುದ್ದಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಅಪಘಾತದಲ್ಲಿ ಗಣೇಶ ಅವರ ಕಾರು ಜಖಂಗೊಂಡಿದ್ದು, ತನ್ನನ್ನು ಪ್ರಾಣಸಹಿತ ಸಾಯಿಸುವ ಉದ್ದೇಶದಿಂದಲೇ ಆರೋಪಿಯು ಈ ಕೃತ್ಯ ಎಸಗಿದ್ದಾನೆ ಎಂದು ಸಂತ್ರಸ್ತ ಯುವಕ ದೂರಿನಲ್ಲಿ ತಿಳಿಸಿದ್ದಾರೆ.
ತನಿಖೆ ಚುರುಕು:
ದೂರಿನ ಆಧಾರದ ಮೇಲೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ (Attempt to Murder) ಸೇರಿದಂತೆ ವಿವಿಧ ಕಠಿಣ ಕಾನೂನು ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

More Stories
ಹೆದ್ದಾರಿ ಅಪಘಾತಕ್ಕೆ ಸ್ಕೂಟಿ ಸವಾರ ಬಲಿ: ಅವೈಜ್ಞಾನಿಕ ವಿನ್ಯಾಸ ಆರೋಪಿಸಿ ಭಟ್ಕಳದಲ್ಲಿ ಸಾರ್ವಜನಿಕರ ಆಕ್ರೋಶ, ಪ್ರತಿಭಟನೆ
ಲಂಡನ್ನಲ್ಲಿ ‘ಅಡ್ವಾನ್ಸ್ಡ್ ನಾಟಿಕಲ್ ಸೈನ್ಸ್’ ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ ಭಟ್ಕಳದ ಹೆಮ್ಮೆಯ ಯುವಕ ಪ್ರಜ್ವಲ್ ನಾಯ್ಕ
ಬೈಲೂರು ಕ್ಲಸ್ಟರ್ನ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮುಂಬೈನ ಅನಿರುದ್ಧ ಬಾಪು ಟ್ರಸ್ಟ್ನಿಂದ ಉಚಿತ ನೋಟ್ಬುಕ್ ವಿತರಣೆ