July 15, 2026

ಶಿಕ್ಷಣದೊಂದಿಗೆ ಬದುಕಿನ ಕೌಶಲ್ಯ ಹಾಗೂ ವ್ಯವಹಾರವನ್ನು ಕಲಿಯುವುದು ಮುಖ್ಯ: ರೋ. ಡಾ. ಅನಂತಮೂರ್ತಿ ಶಾಸ್ತ್ರಿ

ಎಸ್.ಡಿ.ಎಮ್. ಪದವಿಪೂರ್ವ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಒಕ್ಕೂಟ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ

ಹೊನ್ನಾವರ: “ಶಿಕ್ಷಣವೇ ಬೇರೆ ಬದುಕೇ ಬೇರೆ. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ, ಶಿಕ್ಷಣದೊಂದಿಗೆ ಬದುಕಿನ ನಿರ್ಧಾರ ಮತ್ತು ವ್ಯವಹಾರವನ್ನು ಕಲಿಯುವುದು ಬಹಳ ಮುಖ್ಯ. ಉತ್ತಮ ನಾಯಕನನ್ನು ಆಯ್ಕೆ ಮಾಡುವುದರ ಮೂಲಕ ಪ್ರಜ್ಞಾವಂತ ಮತದಾರರಾಗಿರಿ,” ಎಂದು ಖ್ಯಾತ ಚಾರ್ಟೆಡ್ ಇಂಜಿನಿಯರ್ ಹಾಗೂ ಅಪ್ರೂವ್ಡ್ ವ್ಯಾಲ್ಯೂಯರ್ ಆಗಿರುವ ರೋ. ಡಾ. ಅನಂತಮೂರ್ತಿ ಶಾಸ್ತ್ರಿ ಅವರು ಕರೆ ನೀಡಿದರು.

ಅವರು ಇಲ್ಲಿನ ಎಸ್.ಡಿ.ಎಮ್. ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿ ಒಕ್ಕೂಟ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು. ಮುಂದುವರಿದು ಮಾತನಾಡಿದ ಅವರು, “ಬದುಕಿನ ಕೌಶಲ್ಯಗಳನ್ನು ರೂಢಿಸಿಕೊಳ್ಳಿ. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ಸಂಸ್ಥೆಯ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಿರಿ,” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಂದೆ-ತಾಯಿ, ಶಿಕ್ಷಕ ಹಾಗೂ ಸಮಾಜವನ್ನು ಪ್ರೀತಿಸಿ: ಶ್ರೀ ಕೃಷ್ಣಮೂರ್ತಿ ಭಟ್ ಶಿವಾನಿ
ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿ ಭಟ್ ಶಿವಾನಿಯವರು ಮಾತನಾಡಿ, “ವಿದ್ಯಾರ್ಥಿಗಳೇ, ನೀವು 18 ವರ್ಷದ ಸನಿಹದಲ್ಲಿದ್ದೀರಿ. ಮುಂದಿನ ದಿನಗಳಲ್ಲಿ ದೇಶದ ಜವಾಬ್ದಾರಿಯುತ ಮತದಾರರಾಗಲಿದ್ದೀರಿ. ಈ ವರ್ಷ ಕಾಲೇಜಿನಲ್ಲಿ ಇವಿಎಂ (ಇಗಿಒ) ತಂತ್ರಜ್ಞಾನದ ಮೂಲಕ ಮತದಾನ ಪ್ರಕ್ರಿಯೆ ನಡೆಸಿ, ನಿಮ್ಮ ನಾಯಕನನ್ನು ಆಯ್ಕೆ ಮಾಡಿರುವುದು ಅತ್ಯಂತ ಸಂತಸ ತಂದಿದೆ. ತಂದೆ-ತಾಯಿ, ಶಿಕ್ಷಕರು ಹಾಗೂ ಸಮಾಜವನ್ನು ಪ್ರೀತಿಸುವುದನ್ನು ಕಲಿಯಿರಿ, ಆಗ ನಿಮ್ಮಲ್ಲಿ ನಾಯಕತ್ವದ ಗುಣ ತಾನಾಗಿಯೇ ಬೆಳೆಯುತ್ತದೆ,” ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ರಾಜು ಮಾಳಗಿಮನಿ ಅವರು ಮಾತನಾಡಿ, “ನಮ್ಮ ವಿದ್ಯಾಲಯದಲ್ಲಿ ನಡೆಯುವ ಎಲ್ಲಾ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಇದು ಭವಿಷ್ಯದಲ್ಲಿ ಸಮಾಜದೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ,” ಎಂದು ತಿಳಿಸಿದರು.

ಮಾದರಿ ಇವಿಎಂ ಮತದಾನ ಪ್ರಕ್ರಿಯೆ:
ಇದೇ ಸಂದರ್ಭದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀ ಪ್ರಸನ್ನ ಭಟ್ ಅವರು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ, ನಿಜವಾದ ಚುನಾವಣಾ ಮತಗಟ್ಟೆಯಲ್ಲಿ ನಡೆಯುವ ಪ್ರಕ್ರಿಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ನೀಡಿ, ಇವಿಎಂ ಮಾದರಿಯಲ್ಲಿ ಮತದಾನ ಮಾಡಿಸಿ ವಿದ್ಯಾರ್ಥಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿದ್ದು ವಿಶೇಷವಾಗಿತ್ತು. ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಶ್ರೀಮತಿ ಹೇಮಾ ಭಟ್ ಅವರು ಪ್ರಮಾಣ ವಚನ ಬೋಧಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಒಕ್ಕೂಟದ ಸಲಹೆಗಾರರಾದ ಶ್ರೀ ಶ್ರೀರಾಮ್ ಭಟ್ ಅವರು ಅತಿಥಿಗಳನ್ನು ಪರಿಚಯಿಸಿದರು. ವೇದಿಕೆಯಲ್ಲಿ ಕ್ರೀಡಾ ಸಲಹೆಗಾರರಾದ ಕು. ರೇಣುಕಾ ಮೇಸ್ತಾ ಉಪಸ್ಥಿತರಿದ್ದರು.

ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಕು. ಅಮೃತ್ ವಿ. ಶೇಟ್ ಗಣ್ಯರನ್ನು ಸ್ವಾಗತಿಸಿದರೆ, ಕ್ರೀಡಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಕು. ಕ್ರಿಶ್ ಫೆರ್ನಾಂಡಿಸ್ ವಂದನಾರ್ಪಣೆ ಮಾಡಿದರು. ಕು. ಪ್ರತೀಕ್ಷಾ, ಶ್ರಾವಣಿ ಮತ್ತು ಸಿಂಚನಾ ಪ್ರಾರ್ಥಿಸಿದರು. ಕು. ಮಾನಸಾ ಮತ್ತು ಕು. ನೇಹಾ ಕಾರ್ಯಕ್ರಮ ನಿರೂಪಿಸಿದರು.

About The Author

error: Content is protected !!