ಬೈಲೂರು: ಮುಂಬೈನ ಪ್ರಖ್ಯಾತ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಸಂಸ್ಥೆಯಾದ ‘ಶ್ರೀ ಅನಿರುದ್ಧ ಉಪಾಸನಾ ಫೌಂಡೇಶನ್’ (ಸದ್ಗುರು ಅನಿರುದ್ಧ ಬಾಪು ಟ್ರಸ್ಟ್) ವತಿಯಿಂದ ಬೈಲೂರು ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಒಂದು ಶೈಕ್ಷಣಿಕ ವರ್ಷಕ್ಕೆ ಅಗತ್ಯವಿರುವಷ್ಟು ಉಚಿತ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು.


ಮುಂಬೈನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ, ನಂತರ ಭಕ್ತರ ಪ್ರೀತಿಯ “ಬಾಪು” ಎಂದೇ ಖ್ಯಾತರಾಗಿರುವ ಆಧ್ಯಾತ್ಮಿಕ ಗುರು ಶ್ರೀ ಅನಿರುದ್ಧ ಬಾಪು ಅವರ ಮಾರ್ಗದರ್ಶನದಲ್ಲಿ ಈ ಸಮಾಜಮುಖಿ ಕಾರ್ಯಕ್ರಮ ನಡೆದಿದೆ. ದೂರದ ಮುಂಬೈನಿಂದ ಬೈಲೂರಿನಂತಹ ಗ್ರಾಮೀಣ ಭಾಗದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ನಿಟ್ಟಿನಲ್ಲಿ ಟ್ರಸ್ಟ್ ಕಳೆದ 18 ವರ್ಷಗಳಿಂದ ನಿರಂತರವಾಗಿ ಈ ಕ್ಲಸ್ಟರ್‌ನ ಎಲ್ಲಾ ಶಾಲೆಗಳಿಗೆ ಉಚಿತ ನೋಟ್‌ಬುಕ್‌ಗಳನ್ನು ನೀಡುತ್ತಾ ಬಂದಿರುವುದು ವಿಶೇಷ.
ಶಿಕ್ಷಣದಿಂದ ಯಾರೂ ವಂಚಿತರಾಗಬಾರದು: ಕೇಶವ ಬಲ್ಸೆ
ಬೈಲೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ (KPS) ಹಮ್ಮಿಕೊಳ್ಳಲಾಗಿದ್ದ ನೋಟ್‌ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೇಶವ ಬಲ್ಸೆ ಅವರು, “ಈ ಭಾಗದ ಯಾವುದೇ ಮಗುವೂ ಆರ್ಥಿಕ ಸಂಕಷ್ಟದಿಂದಾಗಿ ಶಿಕ್ಷಣದಿಂದ ವಂಚಿತನಾಗಬಾರದು ಎಂಬುದು ಸದ್ಗುರು ಅನಿರುದ್ಧ ಬಾಪು ಅವರ ಆಶಯವಾಗಿದೆ. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಮಹತ್ವದ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ,” ಎಂದು ತಿಳಿಸಿದರು.

ಉನ್ನತ ಸ್ಥಾನ ಗಳಿಸಲು ಕರೆ:
ಪ್ರೌಢಶಾಲಾ ವಿಭಾಗದ ಮುಖ್ಯಾಧ್ಯಾಪಕಿ ಸುಜಾತ ಟಿ. ಹೋರ್ಟಾ ಮಾತನಾಡಿ, “ಬಡ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಭಗವಂತ ವಿಭಿನ್ನ ರೂಪಗಳಲ್ಲಿ ಬಂದು ಸಹಾಯ ಮಾಡುತ್ತಾನೆ ಎಂಬುದಕ್ಕೆ ಸದ್ಗುರು ಶ್ರೀ ಅನಿರುದ್ಧ ಬಾಪು ಅವರೇ ಜೀವಂತ ಉದಾಹರಣೆ. ಗ್ರಾಮೀಣ ಮಕ್ಕಳ ಮೇಲಿನ ಅಪಾರ ಪ್ರೀತಿಯಿಂದ ಈ ಸೇವಾ ಕಾರ್ಯ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸಬೇಕು,” ಎಂದು ಹಾರೈಸಿದರು.
ಇಡೀ ಕ್ಲಸ್ಟರ್‌ನ ಎಲ್ಲಾ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಬೇಕಾಗುವಷ್ಟು ನೋಟ್‌ಬುಕ್‌ಗಳನ್ನು ಉಚಿತವಾಗಿ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಸಿಆರ್‌ಪಿ ವಿಜಯ ಬಾಳಗಿ ಪ್ರಶಂಸಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಉಪಾಧ್ಯಕ್ಷ ರಾಮಾ ನಾಯ್ಕ ಅವರು ಸದ್ಗುರುಗಳ ಈ ನಿರಂತರ ಸೇವಾ ಕಾರ್ಯದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
15 ಶಾಲೆಗಳ ವಿದ್ಯಾರ್ಥಿಗಳಿಗೆ ತಲುಪಿದ ನೆರವು:
ಬೈಲೂರು ಕ್ಲಸ್ಟರ್ ವ್ಯಾಪ್ತಿಯ 10 ಕಿರಿಯ ಪ್ರಾಥಮಿಕ ಶಾಲೆಗಳು, 4 ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ 1 ಪ್ರೌಢ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರಾಥಮಿಕ ವಿಭಾಗದ ಮುಖ್ಯಾಧ್ಯಾಪಕಿ ಗೋಪಿ ಗೊಂಡ ಸ್ವಾಗತಿಸಿದರು. ಪ್ರೌಢ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ ಗೌಡ ಕಾರ್ಯಕ್ರಮ ನಿರೂಪಿಸಿದರೆ, ಪ್ರಾಥಮಿಕ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕ ಧರ್ಮ ನಾಯ್ಕ ವಂದಿಸಿದರು. ಕಾರ್ಯಕ್ರಮದಲ್ಲಿ ಕ್ಲಸ್ಟರ್‌ನ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಎಸ್‌ಡಿಎಂಸಿ ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

More Stories
ಹೆದ್ದಾರಿ ಅಪಘಾತಕ್ಕೆ ಸ್ಕೂಟಿ ಸವಾರ ಬಲಿ: ಅವೈಜ್ಞಾನಿಕ ವಿನ್ಯಾಸ ಆರೋಪಿಸಿ ಭಟ್ಕಳದಲ್ಲಿ ಸಾರ್ವಜನಿಕರ ಆಕ್ರೋಶ, ಪ್ರತಿಭಟನೆ
ಲಂಡನ್ನಲ್ಲಿ ‘ಅಡ್ವಾನ್ಸ್ಡ್ ನಾಟಿಕಲ್ ಸೈನ್ಸ್’ ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ ಭಟ್ಕಳದ ಹೆಮ್ಮೆಯ ಯುವಕ ಪ್ರಜ್ವಲ್ ನಾಯ್ಕ
ಮುರ್ಡೇಶ್ವರ: ಭಟ್ಕಳ ತಾಲೂಕಾ ಹವ್ಯಕ ಬ್ರಾಹ್ಮಣ ನೌಕರರ ಸಂಘದ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ