ಕೂಡ್ಲಿಗಿ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲಾರ್ ಮತ್ತು ವಿಂಡ್ ಪವರ್ (ಪವನ ವಿದ್ಯುತ್) ಕಂಪನಿಗಳ ಹಾವಳಿ ಮಿತಿ ಮೀರಿದ್ದು, ರೈತರಿಗೆ ವಂಚನೆ ಹಾಗೂ ಸರ್ಕಾರಕ್ಕೆ ಕೋಟಿ ಕೋಟಿ ರೂಪಾಯಿ ತೆರಿಗೆ ವಂಚನೆಯಾಗುತ್ತಿರುವ ಶಂಕೆ ವ್ಯಕ್ತವಾಗಿದೆ. ಈ ಬೃಹತ್ ಹಗರಣದ ಬಗ್ಗೆ ಜಿಲ್ಲಾಡಳಿತ, ಲೋಕಾಯುಕ್ತ ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ) ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ.
ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಹೋರಾಟಗಾರರು ತಾಲೂಕು ಆಡಳಿತ ಮತ್ತು ಕಂಪನಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಿಯಮ ಗಾಳಿಗೆ ತೂರಿದ ಕಂಪನಿಗಳು – ಅಧಿಕಾರಿಗಳ ಮೌನಕ್ಕೆ ಆಕ್ಷೇಪ:
ಕ್ಷೇತ್ರದಲ್ಲಿ ಹತ್ತಾರು ಕಂಪನಿಗಳು ಕಾನೂನು ನಿಯಮಗಳನ್ನು ಗಾಳಿಗೆ ತೂರಿ, ಅನಧಿಕೃತವಾಗಿ ತಲೆ ಎತ್ತಿವೆ. ನೂರಾರು ಅಮಾಯಕ ರೈತರಿಗೆ ವಂಚನೆ ಎಸಗಿರುವ ಈ ಕಂಪನಿಗಳು, ಸ್ಥಳೀಯ ಆಡಳಿತ ಹಾಗೂ ತಾಲೂಕು ಆಡಳಿತಕ್ಕೆ ನಿಯಮಾನುಸಾರ ಪಾವತಿಸಬೇಕಾದ ಕೋಟ್ಯಂತರ ರೂಪಾಯಿ ತೆರಿಗೆಯನ್ನು ಬಾಕಿ ಉಳಿಸಿಕೊಂಡು ವಂಚಿಸುತ್ತಿವೆ. ಈ ಬಗ್ಗೆ ಈಗಾಗಲೇ ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಲಿಖಿತ ದೂರು ಸಲ್ಲಿಸಿದ್ದರೂ, ಅಧಿಕಾರಿಗಳು ಯಾವುದೇ ಶಿಸ್ತು ಕ್ರಮ ಜರುಗಿಸದೆ ಮೌನಕ್ಕೆ ಶರಣಾಗಿದ್ದಾರೆ. ಅಧಿಕಾರಿಗಳ ಈ ನಿಗೂಢ ನಡೆ ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೋರಾಟಗಾರರು ದೂರಿದರು.
ಉನ್ನತ ಮಟ್ಟದ ತನಿಖೆಗೆ ಆಗ್ರಹ:
“ಈ ಹಗರಣದಲ್ಲಿ ಸ್ಥಳೀಯ ಆಡಳಿತ, ತಾಲೂಕು ಆಡಳಿತ ಹಾಗೂ ಸಂಬಂಧಪಟ್ಟ ವಿವಿಧ ಇಲಾಖೆಗಳ ಅಧಿಕಾರಿಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಆದ್ದರಿಂದ ಲೋಕಾಯುಕ್ತ, ಇ.ಡಿ, ಸಿಬಿಐ, ಸಿಒಡಿ ಹಾಗೂ ಆದಾಯ ತೆರಿಗೆ ಇಲಾಖೆಯ ಉನ್ನತಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ತಹಶೀಲ್ದಾರ್ ಸೇರಿದಂತೆ ಭ್ರಷ್ಟಾಚಾರದ ಶಂಕೆಯಿರುವ ಎಲ್ಲಾ ಅಧಿಕಾರಿಗಳ ಆದಾಯದ ಮೂಲದ ಕುರಿತು ಮೊದಲು ತನಿಖೆಯಾಗಬೇಕು” ಎಂದು ಅವರು ಒತ್ತಾಯಿಸಿದರು. ಒಂದು ವೇಳೆ ತನಿಖೆಗೆ ನಿರ್ಲಕ್ಷ್ಯ ತೋರಿದರೆ, ಅಗತ್ಯ ಸಾಕ್ಷ್ಯಾಧಾರಗಳ ಸಮೇತ ಕಾನೂನಾತ್ಮಕ ಹೋರಾಟ ರೂಪಿಸುವುದರ ಜೊತೆಗೆ ಎಲ್ಲಾ ಪ್ರಮುಖ ಮಾಧ್ಯಮಗಳ ಕೇಂದ್ರ ಕಚೇರಿಗಳಿಗೂ ದೂರು ತಲುಪಿಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ಸಾಮಾಜಿಕ ಹೋರಾಟಗಾರರಾದ ದಲಿತ ಮುಖಂಡ ಸಂತೋಷ್‌ಕುಮಾರ್, ವಕೀಲರು ಹಾಗೂ ಹೋರಾಟಗಾರರಾದ ಸೂಲದಳ್ಳಿ ಬಸವರಾಜಪ್ಪ, ರೈತ ಸಂಘದ ಯುವ ಮುಖಂಡ ಬಾಣದ ಮಾರುತಿ, ವಿವಿಧ ಗ್ರಾಮಗಳ ಮುಖಂಡರು ಹಾಗೂ ನೊಂದ ಹತ್ತಾರು ಸಂತ್ರಸ್ತ ರೈತರು ಉಪಸ್ಥಿತರಿದ್ದರು.
ವರದಿಗಾರರಾದ ಗುನ್ನಳ್ಳಿ ಶ್ರೀಧರ, ಸಾಲುಮನಿ ರಾಘವೇಂದ್ರ, ಮೀನುಕೇರಿ ತಿಪ್ಪೇಸ್ವಾಮಿ ಹಾಗೂ ಗರುಡ ನ್ಯೂಸ್ ಪ್ರತಿನಿಧಿ ನಾಗರಾಜ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
– ವರದಿ: ವಿ.ಜಿ.ವೃಷಭೇಂದ್ರ, ಕೂಡ್ಲಿಗಿ
About The Author


More Stories
ಸಾರ್ವಜನಿಕ ಆಸ್ಪತ್ರೆ ಆವರಣದಲ್ಲೇ ‘ತಾಯಿ-ಮಕ್ಕಳ ಆಸ್ಪತ್ರೆ’ ನಿರ್ಮಾಣಕ್ಕೆ ಸಾರ್ವಜನಿಕರ ಒತ್ತಾಯ – ಶಾಸಕರ ನಿರ್ಧಾರಕ್ಕೆ ಶ್ಲಾಘನೆ
ಶೇ. 33 ಮೀಸಲಾತಿ ನಮ್ಮ ಹಕ್ಕು: ಕೂಡ್ಲಿಗಿಯಲ್ಲಿ ಜನವಾದಿ ಮಹಿಳಾ ಸಂಘದಿಂದ ಬೃಹತ್ ಪ್ರತಿಭಟನೆ ಹಾಗೂ ಹಕ್ಕೊತ್ತಾಯ
ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಸಂಘಟನಾ ಚತುರ, ಅತ್ಯಂತ ಜನಪ್ರಿಯ ಮಾದರಿ ಶಾಸಕ: ಹರ್ಕರ್ ವೇಣುಗೋಪಾಲ್ ರಾವ್ ಬಣ್ಣನೆ