July 15, 2026

ತಿರುಮಲ ಪ್ರಥಮ ಆರತಿ ಶಿಷ್ಟಾಚಾರ ಪ್ರಸ್ತಾಪ ಸ್ವಾಗತಾರ್ಹ: ಸಿಎಂ ನಿರ್ಧಾರ ಬೆಂಬಲಿಸಿದ ಟಿಟಿಡಿ ಸದಸ್ಯ ಎಸ್. ನರೇಶ್ ಕುಮಾರ್

  • ಕೇವಲ ರಾಜಕಾರಣಿಗಳಿಗೆ ಸೀಮಿತಗೊಳಿಸದೆ, ಅಂದು ತಿರುಮಲದಲ್ಲಿರುವ ಕರ್ನಾಟಕದ ಗಣ್ಯರಿಗೂ ಅವಕಾಶ ನೀಡುವುದು ಸೂಕ್ತ
  • ಮುಖ್ಯಮಂತ್ರಿಯವರ ಧಾರ್ಮಿಕ ಆಸಕ್ತಿ ಶ್ಲಾಘನೀಯ; ಟಿಟಿಡಿ ಸದಸ್ಯ ಭಾನುಪ್ರಕಾಶ್ ಪ್ರತಿಕ್ರಿಯೆಗೆ ಆಕ್ಷೇಪ.
  • ಬೆಂಗಳೂರು, ಜುಲೈ 14: ತಿರುಮಲ ತಿರುಪತಿ ದೇವಸ್ಥಾನದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ನೆರವೇರಿಸುವ ಪ್ರಥಮ ಆರತಿ ಸ್ವೀಕಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಸ್ತಾಪಿಸಿರುವ ಹೊಸ ಶಿಷ್ಟಾಚಾರದ ವ್ಯವಸ್ಥೆ ಐತಿಹಾಸಿಕ ಪರಂಪರೆಗೆ ಗೌರವ ಸಲ್ಲಿಸುವ ಮಹತ್ವದ ಹೆಜ್ಜೆಯಾಗಿದ್ದು, ಇದು ಅತ್ಯಂತ ಸ್ವಾಗತಾರ್ಹ ಎಂದು ಟಿಟಿಡಿ ಆಡಳಿತ ಮಂಡಳಿ ಸದಸ್ಯ ಎಸ್. ನರೇಶ್ ಕುಮಾರ್ ತಿಳಿಸಿದ್ದಾರೆ.
    ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಈ ಐತಿಹಾಸಿಕ ಗೌರವವನ್ನು ಕೇವಲ ರಾಜಕೀಯ ಪ್ರತಿನಿಧಿಗಳಿಗೆ ಮಾತ್ರ ಸೀಮಿತಗೊಳಿಸದೆ, ಆ ದಿನ ತಿರುಮಲದಲ್ಲಿ ಉಪಸ್ಥಿತರಿರುವ ಕರ್ನಾಟಕದ ಪ್ರಮುಖ ಗಣ್ಯರೊಬ್ಬರಿಗೆ ಅವಕಾಶ ಕಲ್ಪಿಸುವ ರೀತಿಯಲ್ಲಿ ಶಿಷ್ಟಾಚಾರ ರೂಪಿಸುವುದು ಹೆಚ್ಚು ಸೂಕ್ತ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಐತಿಹಾಸಿಕ ಪರಂಪರೆಯ ಹಿನ್ನೆಲೆ:

ವಿಜಯನಗರ ಸಾಮ್ರಾಜ್ಯದ ನಂತರ ಮೈಸೂರು ಮಹಾರಾಜರು ತಿರುಪತಿ ದೇವಸ್ಥಾನಕ್ಕೆ ನೀಡಿದ ಅಮೂಲ್ಯ ಸೇವೆಯ ಸ್ಮರಣಾರ್ಥ, ಸುಪ್ರಭಾತ ಸೇವೆಯ ನಂತರ ನಡೆಯುವ ಪ್ರಥಮ ಆರತಿ ಹಾಗೂ ನಿತ್ಯಾರತಿ ಸ್ವೀಕರಿಸುವ ಗೌರವವನ್ನು ಐತಿಹಾಸಿಕವಾಗಿ ಮೈಸೂರು ಮಹಾರಾಜರಿಗೆ ನೀಡಲಾಗುತ್ತಿತ್ತು. ಇಂದಿಗೂ ದೇವರ ಆರತಿಗೆ ಬಳಸುವ ದೀಪ ಮತ್ತು ತುಪ್ಪವನ್ನು ಮೈಸೂರು ಮಹಾರಾಜರ ಹೆಸರಿನಲ್ಲೇ ಸಮರ್ಪಿಸಲಾಗುತ್ತಿದೆ.
ಹಿಂದೆ ಮಹಾರಾಜರ ಅನುಪಸ್ಥಿತಿಯಲ್ಲಿ ಅವರ ಪರವಾಗಿ ದಿವಾನರು ಅಥವಾ ಸರ್ಕಾರದ ಹಿರಿಯ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಪ್ರಸ್ತುತ ಈ ಕುರಿತು ಯಾವುದೇ ಸ್ಪಷ್ಟ ಆಡಳಿತಾತ್ಮಕ ಶಿಷ್ಟಾಚಾರ ಇಲ್ಲದಿರುವುದರಿಂದ ಮುಜರಾಯಿ ಇಲಾಖೆಯ ಅಧಿಕಾರಿಗಳು ಆರತಿ ಸ್ವೀಕರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಈ ಶಿಷ್ಟಾಚಾರವನ್ನು ಮರುಪರಿಶೀಲಿಸುವ ಮುಖ್ಯಮಂತ್ರಿಗಳ ಪ್ರಸ್ತಾಪ ಸ್ವಾಗತಾರ್ಹವಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ದೇವಾಲಯಗಳಿಗೂ ಶಿಷ್ಟಾಚಾರ ಅಗತ್ಯ:

ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಇಂತಹ ಐತಿಹಾಸಿಕ ಸಂಪ್ರದಾಯಗಳು ಹಾಗೂ ಧಾರ್ಮಿಕ ಶಿಷ್ಟಾಚಾರಗಳ ಬಗ್ಗೆ ಆಸಕ್ತಿ ವಹಿಸಿ, ಆಡಳಿತಾತ್ಮಕ ವ್ಯವಸ್ಥೆ ಕಲ್ಪಿಸಲು ಮುಂದಾಗಿರುವುದು ಶ್ಲಾಘನೀಯ. ಇಂತಹ ವ್ಯವಸ್ಥೆಯನ್ನು ಕೇವಲ ಟಿಟಿಡಿ ಅಧೀನದ ದೇವಾಲಯಗಳಿಗೆ ಮಾತ್ರ ಸೀಮಿತಗೊಳಿಸದೆ, ಕರ್ನಾಟಕದ ಪ್ರಮುಖ ದೇವಾಲಯಗಳಲ್ಲಿಯೂ ಐತಿಹಾಸಿಕ ಸಂಪ್ರದಾಯಗಳಿಗೆ ಅನುಗುಣವಾಗಿ ಸೂಕ್ತ ಶಿಷ್ಟಾಚಾರ ರೂಪಿಸುವ ಕುರಿತು ಸರ್ಕಾರ ಚಿಂತನೆ ನಡೆಸಬೇಕಾಗಿದೆ ಎಂದು ನರೇಶ್ ಕುಮಾರ್ ಸಲಹೆ ನೀಡಿದ್ದಾರೆ.

ಭಾನುಪ್ರಕಾಶ್ ಹೇಳಿಕೆಗೆ ಟಾಂಗ್:

ಇದೇ ವೇಳೆ ಮತ್ತೊಬ್ಬ ಟಿಟಿಡಿ ಸದಸ್ಯ ಭಾನುಪ್ರಕಾಶ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ನರೇಶ್ ಕುಮಾರ್, “ಭಾನುಪ್ರಕಾಶ್ ಅವರು ಮುಖ್ಯಮಂತ್ರಿಯವರ ಹೇಳಿಕೆಯ ಹಿನ್ನೆಲೆಯನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳದೆ ಪ್ರತಿಕ್ರಿಯಿಸಿರುವುದು ಸರಿಯಲ್ಲ. ಕರ್ನಾಟಕ ಸರ್ಕಾರ ಈ ಕುರಿತು ಅಧಿಕೃತ ಪ್ರಸ್ತಾವನೆಯನ್ನು ಟಿಟಿಡಿ ಆಡಳಿತ ಮಂಡಳಿಗೆ ಸಲ್ಲಿಸಿದಲ್ಲಿ, ದೇವಸ್ಥಾನದ ಸಂಪ್ರದಾಯ, ಐತಿಹಾಸಿಕ ಹಿನ್ನೆಲೆ ಹಾಗೂ ಜಾರಿಯಲ್ಲಿರುವ ನಿಯಮಾವಳಿಗಳನ್ನು ಪರಿಗಣಿಸಿ ಆಡಳಿತ ಮಂಡಳಿ ಸಕಾರಾತ್ಮಕವಾಗಿ ಪರಿಶೀಲಿಸಲಿದೆ” ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

About The Author

error: Content is protected !!