ಹೊನ್ನಾವರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹೊನ್ನಾವರ ತಾಲೂಕು ಘಟಕದ ಆಶ್ರಯದಲ್ಲಿ ಪಟ್ಟಣದ ‘ನ್ಯೂ ಇಂಗ್ಲಿಷ್ ಸ್ಕೂಲ್’ ಸಭಾಭವನದಲ್ಲಿ ಶನಿವಾರ “ಪತ್ರಿಕಾ ದಿನಾಚರಣೆ” ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.

ಪತ್ರಿಕೋದ್ಯಮ ರಾಜಕಾರಣಿಗಳ ಹೊಗಳಿಕೆಯಾಗಬಾರದು: ದೀಪಕ ಕುಮಾರ ಶೇಣ್ವಿ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಂಕಣ ವಾಹಿನಿ ಪತ್ರಿಕೆಯ ಪ್ರಧಾನ ಸಂಪಾದಕರು ಹಾಗೂ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಜಿಲ್ಲಾ ವರದಿಗಾರರಾದ ದೀಪಕ ಕುಮಾರ ಶೇಣ್ವಿ ಅವರು ಇಂದಿನ ಮಾಧ್ಯಮ ರಂಗದ ಸ್ಥಿತಿಗತಿಯ ಕುರಿತು ಕಳಕಳಿಯ ನುಡಿಗಳನ್ನಾಡಿದರು:
ಬದಲಾವಣೆಯ ಲಕ್ಷಣ: ಹೊನ್ನಾವರದಲ್ಲಿ ಇಂದು ದೊಡ್ಡ ಸಂಖ್ಯೆಯ ಯುವ ಪತ್ರಕರ್ತರ ಸಮೂಹ ಇರುವುದು ಪತ್ರಿಕೋದ್ಯಮದಲ್ಲಿ ಆಗುತ್ತಿರುವ ಸಕಾರಾತ್ಮಕ ಬದಲಾವಣೆಯ ಲಕ್ಷಣವಾಗಿದೆ.

ಸೇವೆಯಿಂದ ಉದ್ಯಮದತ್ತ: ಪತ್ರಿಕೋದ್ಯಮ ಇಂದು ಮೊದಲಿನಂತಿಲ್ಲ. ಇದು ಸೇವೆಯ ಬದಲು ಜಾಹೀರಾತುಗಳ ಮರ್ಜಿಗೆ ಸಿಲುಕಿ ಉದ್ಯಮವಾಗಿ ಬೆಳೆದಿದೆ.
ನೈತಿಕತೆಯೇ ಶಕ್ತಿ: ಪತ್ರಕರ್ತರಿಗೆ ನೈತಿಕತೆ ಇದ್ದರೆ ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಸಮಾಜದಲ್ಲಿ ಶೋಷಿತರ ಪರವಾಗಿ ಧ್ವನಿ ಎತ್ತುವುದೇ ನಿಜವಾದ ಪತ್ರಿಕೋದ್ಯಮವೇ ಹೊರತು, ಯಾವುದೋ ರಾಜಕಾರಣಿಯನ್ನು ಹೊಗಳಿ ಸುದ್ದಿ ಬರೆಯುವುದಲ್ಲ. ಯಾರೇ ತಪ್ಪು ಮಾಡಿದಾಗಲೂ ಎಚ್ಚರಿಸುವ ಕೆಲಸ ಮುಲಾಜಿಲ್ಲದೆ ಆಗಬೇಕು ಎಂದರು.
ಪ್ರಾಮಾಣಿಕ ಪತ್ರಕರ್ತ ಎಂದಿಗೂ ಬ್ಲಾಕ್ ಮೇಲ್ ಮಾಡುವುದಿಲ್ಲ: ನರಸಿಂಹ ಅಡಿ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ನರಸಿಂಹ ಅಡಿ ಮಾತನಾಡಿ, “ಓರ್ವ ಪ್ರಾಮಾಣಿಕ, ನೈತಿಕತೆ ಹಾಗೂ ಜವಾಬ್ದಾರಿಯುತ ಪತ್ರಕರ್ತ ಎಂದಿಗೂ ಬ್ಲಾಕ್ ಮೇಲ್ ತಂತ್ರಕ್ಕೆ ಇಳಿಯುವುದಿಲ್ಲ. ಜವಾಬ್ದಾರಿಯುತ ಪತ್ರಿಕೆಗೆ ಸ್ಪಷ್ಟ ಮಾಹಿತಿ ಮತ್ತು ಪೂರಕ ದಾಖಲೆಗಳು ಮುಖ್ಯವೇ ಹೊರತು ಊಹಾಪೋಹಗಳ ಆಧಾರದ ಮೇಲೆ ವರದಿ ಮಾಡಲು ಸಾಧ್ಯವಿಲ್ಲ. ಪತ್ರಕರ್ತರು ಕೇವಲ ಜಾಹೀರಾತಿಗಾಗಿ ಹಣ ಪಡೆಯುತ್ತಾರೆಯೇ ಹೊರತು ವರದಿಗಾಗಿ ಅಲ್ಲ,” ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ಸುಸಜ್ಜಿತ ‘ಪತ್ರಿಕಾ ಭವನ’ ನಿರ್ಮಿಸುವಂತೆ ಅವರು ಸರ್ಕಾರವನ್ನು ಆಗ್ರಹಿಸಿದರು.
ಕನ್ನಡ ಪತ್ರಿಕೋದ್ಯಮಕ್ಕೆ 183 ವರ್ಷಗಳ ಸುದೀರ್ಘ ಇತಿಹಾಸ: ಮಾರುತಿ ನಾಯ್ಕ
ಸಂಘದ ಜಿಲ್ಲಾ ಉಪಾಧ್ಯಕ್ಷ ಮಾರುತಿ ನಾಯ್ಕ ಮಾತನಾಡಿ, “ಮಂಗಳೂರಿನಲ್ಲಿ ಹರ್ಮನ್ ಮೊಗ್ಲಿಂಗ್ ಅವರಿಂದ 1843 ರಲ್ಲಿ ಕಲ್ಲಚ್ಚಿನ ಮೊಳೆಯಲ್ಲಿ ಆರಂಭವಾದ ಪತ್ರಿಕೆ, ಇಂದು ಡಿಜಿಟಲ್ ರೂಪಕ್ಕೆ ತಲುಪಿದೆ. ಕನ್ನಡ ಪತ್ರಿಕೋದ್ಯಮಕ್ಕೆ ಸುದೀರ್ಘ 183 ವರ್ಷಗಳ ಇತಿಹಾಸವಿದ್ದು, ಅನೇಕ ದಿಗ್ಗಜರು ಈ ರಂಗವನ್ನು ಸೇವೆಯಾಗಿ ಆಳಿಹೋಗಿದ್ದಾರೆ,” ಎಂದು ಹೆಮ್ಮೆಯಿಂದ ಸ್ಮರಿಸಿದರು.
ಸಾಧಕರಿಗೆ ಸನ್ಮಾನ ಮತ್ತು ಗೌರವ:
ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ ‘ಹಾಯ್ ಹೊನ್ನಾವರ’ ಪತ್ರಿಕೆಯ ಸಂಪಾದಕ ಮುರುಳೀಧರ ಗಾಯತೊಂಡೆ ಹಾಗೂ ಪ್ರಗತಿಪರ ರೈತ ನಾಗಪ್ಪ ಕುಪ್ಪ ಗೌಡ ಕೆಕ್ಕಾರ ಅವರನ್ನು ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಪತ್ರಕರ್ತರಾದ ವಿವೇಕ್ ಶೇಟ್ ಮತ್ತು ನಾಗರಾಜ ಖರ್ವಾ ಅವರು ಸನ್ಮಾನ ಪತ್ರ ವಾಚಿಸಿದರು.
ವೃತ್ತಿ ಗೌರವಕ್ಕೆ ಬದ್ಧ: ವಿನಾಯಕ ಮೇಸ್ತ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಘಟಕದ ಅಧ್ಯಕ್ಷ ವಿನಾಯಕ ಮೇಸ್ತ ಮಾತನಾಡಿ, “ಪತ್ರಿಕೋದ್ಯಮದಲ್ಲಿ ಇಂದು ನೂರಾರು ಸವಾಲುಗಳಿವೆ. ನಮ್ಮ ವೈಯಕ್ತಿಕ ಕಷ್ಟಗಳ ನಡುವೆಯೂ ಯಾರನ್ನೂ ತೇಜೋವಧೆ ಮಾಡದೆ, ವೃತ್ತಿ ಗೌರವವನ್ನು ಕಾಯ್ದುಕೊಂಡು ಸಮಾಜ ಸೇವೆ ಸಲ್ಲಿಸುತ್ತಿದ್ದೇವೆ,” ಎಂದರು.
ವೇದಿಕೆಯಲ್ಲಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸತೀಶ ತಾಂಡೇಲ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಜಿ.ಯು.ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿ ಪತ್ರಿಕೋದ್ಯಮದ ಇತಿಹಾಸವನ್ನು ವಿವರಿಸಿದರು. ವಿಶ್ವನಾಥ ಸಾಲ್ಕೋಡ್ ಸ್ವಾಗತಿಸಿದರು, ಪ್ರಸಾದ ಹೆಗಡೆ ನಿರೂಪಿಸಿದರು ಹಾಗೂ ನಾಗರಾಜ ನಾಯ್ಕ ವಂದಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಎಮ್.ಎನ್ ಸುಬ್ರಹ್ಮಣ್ಯ, ಶ್ರೀಧರ ನಾಯ್ಕ ಮತ್ತು ಶಿವಾನಂದ ಮೇಸ್ತ ಸಹಕರಿಸಿದರು.

More Stories
ಹೊನ್ನಾವರದಲ್ಲಿ ಜುಲೈ 26ರಂದು ‘ಕಾರ್ಗಿಲ್ ವಿಜಯ ದಿವಸ’: ಬೃಹತ್ ರ್ಯಾಲಿ ಹಾಗೂ ಹುತಾತ್ಮ ಯೋಧರಿಗೆ ಪುಷ್ಪನಮನ ಕಾರ್ಯಕ್ರಮ
ಕ್ರೀಡಾಕೂಟದಲ್ಲಿ ಮಂಕಿಯ ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳ ಅದ್ಭುತ ಸಾಧನೆ:
ಕಿಸಾ (KISA) ಯೋಗ ಸ್ಪರ್ಧೆ: ಮಂಕಿಯ ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಗೆ ಪ್ರಥಮ ಸ್ಥಾನ