ಹೊನ್ನಾವರ : ಧರ್ಮಸ್ಥಳದ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜರು ತಮ್ಮ ಆತ್ಮೋನ್ನತಿ ಹಾಗೂ ಲೋಕಕಲ್ಯಾಣಾರ್ಥವಾಗಿ 2026ನೇ ಸಾಲಿನ ಚಾತುರ್ಮಾಸ್ಯ ವ್ರತಾಚರಣೆಯನ್ನು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ಕೈಗೊಳ್ಳಲಿದ್ದಾರೆ ಎಂದು ಶ್ರೀ ರಾಮಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷರಾದ ವಾಮನ ನಾಯ್ಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಧಾರ್ಮಿಕ ವ್ರತಾಚರಣೆಯು ಜುಲೈ 29, 2026 ರಿಂದ ಸೆಪ್ಟೆಂಬರ್ 14, 2026 ರವರೆಗೆ ನಡೆಯಲಿದ್ದು, ಜುಲೈ 29 ರ ಬುಧವಾರ ‘ಗುರುಪೂರ್ಣಿಮೆ’ಯ ಶುಭ ದಿನದಂದು ಬೆಳಿಗ್ಗೆ 11:05 ಕ್ಕೆ ಒದಗುವ ಶುಭ ಮುಹೂರ್ತದಲ್ಲಿ ಶ್ರದ್ಧಾ ಭಕ್ತಿಗಳಿಂದ ಚಾಲನೆ ಸಿಗಲಿದೆ.
ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ:
ವ್ರತ ಸಂಕಲ್ಪ ಹಾಗೂ ಮೆರವಣಿಗೆ: ಜುಲೈ 29 ರಂದು ಬೆಳಿಗ್ಗೆ ರಾಮತಾರಕ ಯಜ್ಞ ಮತ್ತು ವೈದಿಕ ವಿಧಿ-ವಿಧಾನಗಳು ನೆರವೇರಲಿವೆ. ಬೆಳಿಗ್ಗೆ 10:00 ಗಂಟೆಗೆ ಶ್ರೀ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪೂಜ್ಯ ಶ್ರೀಗಳ ಭವ್ಯ ಪುರಪ್ರವೇಶ ಮೆರವಣಿಗೆ ಆರಂಭಗೊಳ್ಳಲಿದೆ.

ವ್ಯಾಸಪೀಠಾರೋಹಣ: ಪೂರ್ವಾಹ್ನ 11:00 ಗಂಟೆಗೆ ಶ್ರೀ ಬಿಳಿಶಿಲೆ ವಿನಾಯಕ ದೇವರಿಗೆ ವಿಶೇಷ ಪೂಜೆ ನೆರವೇರಿ, ಬೆಳಿಗ್ಗೆ 11:05 ಕ್ಕೆ ಶ್ರೀಗಳ ವ್ಯಾಸಪೀಠ ಪೀಠಾರೋಹಣ ಹಾಗೂ ಗುರುಪಾದುಕಾ ಪೂಜೆ ನಡೆಯಲಿದೆ.
ದೈನಂದಿನ ಪೂಜಾ ವಿಧಿಗಳು: ಚಾತುರ್ಮಾಸ್ಯದ ಅವಧಿಯಲ್ಲಿ ಪ್ರತಿದಿನ ಬೆಳಿಗ್ಗೆ 10:00 ರಿಂದ 11:00 ರವರೆಗೆ ಭಜನೆ, ಗುರುಪಾದುಕಾ ಪೂಜೆ, ಆಶೀರ್ವಚನ, ಮಂತ್ರಾಕ್ಷತೆ ಹಾಗೂ ಅನ್ನಸಂತರ್ಪಣೆ ಜರುಗಲಿದೆ. ಪ್ರತಿದಿನ ಸಂಜೆ 5:30 ರಿಂದ 9:30 ರವರೆಗೆ ಭಕ್ತಿ ಪ್ರಧಾನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಪಟ್ಟಾಭಿಷೇಕ ವರ್ಧಂತಿ: ಸೆಪ್ಟೆಂಬರ್ 03, 2026 ರಂದು ಪೂಜ್ಯ ಶ್ರೀಗಳ ವಾರ್ಷಿಕ ಪಟ್ಟಾಭಿಷೇಕ ವರ್ಧಂತಿ ಮಹೋತ್ಸವವು ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ವೈಭವದಿಂದ ನೆರವೇರಲಿದೆ.
ಪ್ರಮುಖ ರಾಜಕೀಯ ಹಾಗೂ ಧಾರ್ಮಿಕ ಧುರೀಣರ ಭಾಗಿ:
ಜುಲೈ 29 ರಂದು ನಡೆಯಲಿರುವ ಧರ್ಮಸಭೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಶ್ರೀ ಬಿ.ಎಲ್. ಸಂತೋಷ್ ಉದ್ಘಾಟಿಸಲಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಶ್ರೀ ಬಿ. ವೈ. ರಾಘವೇಂದ್ರ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷ ಶ್ರೀ ಬಿ.ಕೆ. ಹರಿಪ್ರಸಾದ್, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಸಂಸದರು, ಶಾಸಕರು, ಮಾಜಿ ಸಚಿವರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಮಠದ ಭವಿಷ್ಯದ ಯೋಜನೆಗಳು:
ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಗಳ ಆಶಯದಂತೆ 9 ಕಡೆಗಳಲ್ಲಿ ಶಾಖಾ ಮಠಗಳನ್ನು ಸ್ಥಾಪಿಸುವ ಸಂಕಲ್ಪವನ್ನು ಹೊಂದಲಾಗಿದ್ದು, ಅಯೋಧ್ಯೆಯಲ್ಲಿ ಮಠ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಹರಿದ್ವಾರದಲ್ಲಿ ಶಾಖಾ ಮಠ ಪ್ರಾರಂಭಿಸಿ 10 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ನವೆಂಬರ್ 2026 ರಲ್ಲಿ ದಶಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಅಲ್ಲದೆ, 2027 ರಲ್ಲಿ ನಾಸಿಕದಲ್ಲಿ ನಡೆಯಲಿರುವ ಕುಂಭಮೇಳದಲ್ಲಿ ಶ್ರೀಗಳು ಚಾತುರ್ಮಾಸ್ಯ ವ್ರತಾಚರಣೆ ಕೈಗೊಳ್ಳಲಿದ್ದಾರೆ ಎಂದು ಟಿ ಟಿ ನಾಯ್ಕ ತಿಳಿಸಿದರು.
ಭಕ್ತಾದಿಗಳಿಗೆ ಆಹ್ವಾನ:
ಈ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಕುಟುಂಬ ಸಮೇತರಾಗಿ ಭಾಗವಹಿಸಿ, ಶ್ರೀ ವಿನಾಯಕ ಹಾಗೂ ಶ್ರೀ ರಾಮದೇವರ ಕೃಪೆಗೆ ಪಾತ್ರರಾಗಬೇಕಾಗಿ ಹೊನ್ನಾವರದ ಶ್ರೀ ರಾಮಕ್ಷೇತ್ರ ಸೇವಾ ಸಮಿತಿಯ ಪ್ರಮೂಖರು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಟಿ.ಟಿ.ನಾಯ್ಕ, ಆರ್.ಎಂ.ನಾಯ್ಕ, ಗೋವಿಂದ ನಾಯ್ಕ, ಸುರೇಶ ನಾಯ್ಕ, ಕೆ.ಆರ್.ನಾಯ್ಕ, ರಾಮಪ್ಪ ನಾಯ್ಕ, ಎಸ್.ಕೆ.ನಾಯ್ಕ, ಎಂ.ಕೆ.ನಾಯ್ಕ, ಲಂಬೋದರ ನಾಯ್ಕ, ಕೃಷ್ಣ ನಾಯ್ಕ, ಗಿರಿ ನಾಯ್ಕ, ಐ.ವಿ.ನಾಯ್ಕ, ಮಂಜುನಾಥ ನಾಯ್ಕ, ಸಂತೋಷ ನಾಯ್ಕ, ಗಜಾನನ ನಾಯ್ಕ, ಸದಾನಂದ ನಾಯ್ಕ, ಜಗದೀಶ ನಾಯ್ಕ, ರವಿ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

More Stories
ಹೊನ್ನಾವರದಲ್ಲಿ ಜುಲೈ 26ರಂದು ‘ಕಾರ್ಗಿಲ್ ವಿಜಯ ದಿವಸ’: ಬೃಹತ್ ರ್ಯಾಲಿ ಹಾಗೂ ಹುತಾತ್ಮ ಯೋಧರಿಗೆ ಪುಷ್ಪನಮನ ಕಾರ್ಯಕ್ರಮ
ಕ್ರೀಡಾಕೂಟದಲ್ಲಿ ಮಂಕಿಯ ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳ ಅದ್ಭುತ ಸಾಧನೆ:
ಕಿಸಾ (KISA) ಯೋಗ ಸ್ಪರ್ಧೆ: ಮಂಕಿಯ ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಗೆ ಪ್ರಥಮ ಸ್ಥಾನ