ದೋಹಾ: ಕತಾರ್‌ನಲ್ಲಿ ಮೂರು ವರ್ಷಗಳ ಯಶಸ್ವಿ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಭಾರತದ ಮಾನ್ಯ ರಾಯಭಾರಿ ಘನತೆವೆತ್ತ ಶ್ರೀ ವಿಪುಲ್ ಅವರಿಗೆ ಅನಿವಾಸಿ ಭಾರತೀಯ ಸಮುದಾಯವು ಅತ್ಯಂತ ಭಾವಪೂರ್ಣ ಬೀಳ್ಕೊಡುಗೆ ನೀಡಿತು.
ದೋಹಾದ ಐಸಿಸಿ ಅಶೋಕ ಸಭಾಂಗಣದಲ್ಲಿ ನಡೆದ ಈ ವರ್ಣರಂಜಿತ ಸಮಾರಂಭವನ್ನು ಭಾರತೀಯ ಸಾಂಸ್ಕೃತಿಕ ಕೇಂದ್ರ (ICC), ಭಾರತೀಯ ಸಮುದಾಯ ಕಲ್ಯಾಣ ವೇದಿಕೆ (ICBF), ಭಾರತೀಯ ಕ್ರೀಡಾ ಕೇಂದ್ರ (ISC) ಹಾಗೂ ಭಾರತೀಯ ಉದ್ಯಮ ಮತ್ತು ವೃತ್ತಿಪರರ ಮಂಡಳಿ (IBPC) ಜಂಟಿಯಾಗಿ ಆಯೋಜಿಸಿದ್ದವು.
‘ಪೀಪಲ್ಸ್ ಅಂಬಾಸಿಡರ್’ ಗೌರವ:
ಸಮಾರಂಭದಲ್ಲಿ ಭಾಗವಹಿಸಿದ್ದ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಗಣ್ಯರು, ಘನತೆವೆತ್ತ ಶ್ರೀ ವಿಪುಲ್ ಅವರನ್ನು ‘ಪೀಪಲ್ಸ್ ಅಂಬಾಸಿಡರ್’ ಎಂದು ಮುಕ್ತಕಂಠದಿಂದ ಶ್ಲಾಘಿಸಿದರು. ಸಾಮಾನ್ಯ ಜನರ ಕಷ್ಟ-ಸುಖಗಳಿಗೆ ತಕ್ಷಣವೇ ಸ್ಪಂದಿಸುವ ಹಾಗೂ ಪ್ರತಿಯೊಬ್ಬರಿಗೂ ಸದಾ ತೆರೆದ ಬಾಗಿಲ ನೀತಿಯನ್ನು ಅನುಸರಿಸುತ್ತಿದ್ದ ಅವರ ಜನಪರ ಸೇವೆಯನ್ನು ಸಭೆಯಲ್ಲಿ ಸ್ಮರಿಸಲಾಯಿತು.
ಸಮುದಾಯದ ಶಿಸ್ತಿಗೆ ರಾಯಭಾರಿ ಮೆಚ್ಚುಗೆ:
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾನ್ಯ ರಾಯಭಾರಿ ಶ್ರೀ ವಿಪುಲ್ ಅವರು, “ಕತಾರ್‌ನಲ್ಲಿರುವ 8.3 ಲಕ್ಷಕ್ಕೂ ಹೆಚ್ಚು ಭಾರತೀಯ ಸಮುದಾಯವು ವಿಶ್ವದಲ್ಲೇ ಅತ್ಯಂತ ಶಿಸ್ತಿನ ಸಮುದಾಯವಾಗಿದೆ. ನನ್ನ ಅಧಿಕಾರಾವಧಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕತಾರ್ ಭೇಟಿ ಹಾಗೂ ಕತಾರ್ ಅಮೀರ್ ಅವರ ಭಾರತ ಭೇಟಿಗಳು ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿವೆ,” ಎಂದು ಸ್ಮರಿಸಿದರು. ಅಲ್ಲದೆ, ಕರ್ನಾಟಕ ಸಂಘ ಕತಾರ್ ಸೇರಿದಂತೆ ಎಲ್ಲಾ ಅನುಬಂಧಿತ ಸಾಂಸ್ಕೃತಿಕ ಸಂಸ್ಥೆಗಳು ವಿದೇಶದಲ್ಲೂ ಭಾರತೀಯ ಸಂಸ್ಕೃತಿಯನ್ನು ಸಜೀವವಾಗಿರಿಸಿರುವ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಸಂಘ ಕತಾರ್‌ನಿಂದ ಕೃತಜ್ಞತೆ:
ಕಾರ್ಯಕ್ರಮದ ಭಾಗವಾಗಿ ಕರ್ನಾಟಕ ಸಂಘ ಕತಾರ್‌ನ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಹಾಗೂ ಸಲಹೆಗಾರರು ಮಾನ್ಯ ರಾಯಭಾರಿಯವರನ್ನು ಖುದ್ದಾಗಿ ಭೇಟಿಯಾದರು. ಕತಾರ್‌ನಲ್ಲಿರುವ ಅನಿವಾಸಿ ಕನ್ನಡಿಗರಿಗೆ, ಕನ್ನಡ ಭಾಷೆ, ಸಂಸ್ಕೃತಿ ಹಾಗೂ ವಿವಿಧ ಸಾಮಾಜಿಕ ಕಾರ್ಯಕ್ರಮಗಳಿಗೆ ಅವರು ನೀಡಿದ ನಿರಂತರ ಬೆಂಬಲ, ಹಾರೈಕೆ ಮತ್ತು ಮಾರ್ಗದರ್ಶನಕ್ಕಾಗಿ ಶ್ರದ್ಧಾಪೂರ್ವಕ ಧನ್ಯವಾದಗಳನ್ನು ಅರ್ಪಿಸಿ, ಅವರ ಮುಂದಿನ ಶುಭ ಪಯಣಕ್ಕೆ ಶುಭ ಹಾರೈಸಿದರು.

ಸಮಾರಂಭದಲ್ಲಿ ಐಸಿಸಿ (ICC) ಅಧ್ಯಕ್ಷ ಎ.ಪಿ. ಮಣಿಕಂಠನ್, ಐಸಿಬಿಎಫ್ (ICBF) ಅಧ್ಯಕ್ಷ ಶಾನವಾಸ್ ಬಾವಾ, ಐಎಸ್‌ಸಿ (ISC) ಅಧ್ಯಕ್ಷ ಇ.ಪಿ. ಅಬ್ದುಲ್ ರಹಮಾನ್, ಐಬಿಪಿಸಿ (IBPC) ಅಧ್ಯಕ್ಷ ತಾಹಾ ಮಹಮ್ಮದ್ ಹಾಗೂ ಕರ್ನಾಟಕ ಸಂಘ ಕತಾರ್ ಪ್ರತಿನಿಧಿಗಳು ಸೇರಿದಂತೆ ನೂರಾರು ಅನಿವಾಸಿ ಭಾರತೀಯರು ಭಾಗವಹಿಸಿದ್ದರು.

More Stories
ಕತಾರ್‌ನ ಸ್ಥಳೀಯ ಶಾಲೆಗಳಲ್ಲಿ ಕನ್ನಡ ಭಾಷೆ ಅನುಷ್ಠಾನಕ್ಕೆ ಭಾರತೀಯ ರಾಯಭಾರ ಕಚೇರಿಯ ಸಂಪೂರ್ಣ ಆಡಳಿತಾತ್ಮಕ ಬೆಂಬಲ: ಪ್ರಥಮ ಕಾರ್ಯದರ್ಶಿ ಶ್ರೀ ಹರೀಶ್ ಪಾಂಡೆ
ಭಾರತೀಯ ಸಂಘಟನೆಗಳ ಒಗ್ಗಟ್ಟು ಮತ್ತು ಸಮನ್ವಯತೆಯಿಂದ ಮಾತ್ರ ಸಾಂಸ್ಕೃತಿಕ ವೈವಿಧ್ಯತೆಯ ಪ್ರಚಾರ ಸಾಧ್ಯ: ಉಪ ರಾಯಭಾರಿ ಶ್ರೀ ಸಂದೀಪ್ ಕುಮಾರ್
ಕತಾರ್ ಕನ್ನಡಿಗರಿಂದ ಗಾಯಕ ರಾಜೇಶ್ ಕೃಷ್ಣನ್ ಅವರಿಗೆ ಪ್ರತಿಷ್ಠಿತ “ಸ್ವರ ಯೋಗಿ” ಬಿರುದು ಪ್ರದಾನ: