July 27, 2026

ಪಾರಂಪರಿಕ ಆಚರಣೆಗಳ ವೈಜ್ಞಾನಿಕತೆಯನ್ನು ಸಮಾಜಕ್ಕೆ ತಿಳಿಸಬೇಕು: ರಾಮಚಂದ್ರಾಪುರ ಶ್ರೀ

ಗೋಕರ್ಣ: ನಮ್ಮ ಪ್ರಾಚೀನ ಆಚರಣೆಗಳ ಹಿನ್ನೆಲೆ ಮತ್ತು ವೈಜ್ಞಾನಿಕತೆ ತಿಳಿಯದೇ ಅನೇಕರು ಅವುಗಳನ್ನು ಕಂದಾಚಾರವೆಂದು ಭಾವಿಸಿ ಕೈಬಿಡುತ್ತಿದ್ದಾರೆ. ಆದ್ದರಿಂದ ಪಾರಂಪರಿಕ ಆಚರಣೆಗಳ ಹಿಂದಿರುವ ತರ್ಕ ಮತ್ತು ವೈಜ್ಞಾನಿಕತೆಯನ್ನು ಸಮಾಜಕ್ಕೆ ಮನವರಿಕೆ ಮಾಡಿಕೊಡುವ ಅಗತ್ಯತೆ ಇದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಕರೆ ನೀಡಿದ್ದಾರೆ.


ಗೋಕರ್ಣದ ಅಶೋಕೆ ಮೂಲಮಠದ ಪರಿಸರದಲ್ಲಿ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಅಂಗವಾಗಿ ಜುಲೈ 27ರಂದು ಹಮ್ಮಿಕೊಳ್ಳಲಾಗಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಆಶೀರ್ವಚನ ನೀಡಿದರು.


ಸಮಭಾವದ ಸೇವೆ ಮತ್ತು ವಿಚಾರ ಪ್ರಧಾನ ಚಾತುರ್ಮಾಸ್ಯ:
“ಮಠಕ್ಕೆ ಆಗಮಿಸುವ ಪ್ರತಿಯೊಬ್ಬರನ್ನೂ ಭಗವಂತನೆಂದು ಭಾವಿಸಬೇಕು. ಬಡವ-ಶ್ರೀಮಂತ ಎಂಬ ಭೇದಭಾವ ಮಾಡದೆ ಬಂದವರೆಲ್ಲರೂ ಸಂತೃಪ್ತಿಯಿಂದ ಹಿಂತಿರುಗುವಂತೆ ನೋಡಿಕೊಳ್ಳುವುದು ಕಾರ್ಯಕರ್ತರ ಕರ್ತವ್ಯ” ಎಂದು ಶ್ರೀಗಳು ಮಾರ್ಗದರ್ಶನ ಮಾಡಿದರು. ಪ್ರಸ್ತುತ ಆಹಾರ ಶೈಲಿಯಲ್ಲಿ ಅನೇಕ ಲೋಪಗಳಿದ್ದು, ನಾವು ಸ್ವೀಕರಿಸುವ ಆಹಾರ ನಮ್ಮ ಜೀವನದ ಮೇಲೆ ಮಹತ್ತರ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಚಾತುರ್ಮಾಸ್ಯವನ್ನು ‘ವಿಚಾರ ಪ್ರಧಾನ’ ಹಾಗೂ ‘ಆಹಾರ ಜಾಗೃತಿ’ಯ ರೂಪದಲ್ಲಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.


ಜುಲೈ 29 ರಿಂದ ‘ಅನ್ನಬ್ರಹ್ಮ ಚಾತುರ್ಮಾಸ್ಯ’:
ಶ್ರೀಗಳ 33ನೇ ವರ್ಷದ ಚಾತುರ್ಮಾಸ್ಯ ವ್ರತವು ಜುಲೈ 29 ರಿಂದ ಸೆಪ್ಟೆಂಬರ್ 26, 2026 ರವರೆಗೆ ನಡೆಯಲಿದೆ. ಜುಲೈ 29ರ ಬುಧವಾರದಂದು ವ್ಯಾಸಪೂಜೆ ನೆರವೇರಿಸುವ ಮೂಲಕ ಚಾತುರ್ಮಾಸ್ಯ ಸಂಕಲ್ಪ ಸ್ವೀಕರಿಸಲಿದ್ದಾರೆ. ಈ ಅವಧಿಯಲ್ಲಿ ಆಹಾರದ ಉದ್ದೇಶ, ಜಲಪಾನದ ನಿಯಮಗಳು, ಉಪವಾಸದ ಮಹತ್ವ, ಭೋಜನ ಪಾತ್ರೆಗಳ ಬಳಕೆ ಹಾಗೂ ಪ್ರಾಚೀನ ಆಹಾರ ಶೈಲಿಯ ಕುರಿತು ಶ್ರೀಗಳಿಂದ ವಿಶೇಷ ಪ್ರವಚನಗಳು ಮತ್ತು ತತ್ತ್ವ ಸಂವಾದಗಳು ನೆರವೇರಲಿವೆ.


ಧಾನ್ಯಲಕ್ಷ್ಮೀ ಪೂಜೆ ಸನ್ನಿವೇಶ:
ಚಾತುರ್ಮಾಸ್ಯದ ನಿಮಿತ್ತ ರಾಜ್ಯದ 11 ಮಂಡಲಗಳು ಹಾಗೂ ಶಿಷ್ಯಭಕ್ತರಿಂದ ಸಮರ್ಪಿತವಾದ ವಿವಿಧ ಸುವಸ್ತು ಹಾಗೂ ಧಾನ್ಯಲಕ್ಷ್ಮಿಗೆ ಜುಲೈ 26 ರಂದು ಶ್ರೀಗಳು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕುಮಟಾ ಶಾಸಕ ದಿನಕರ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಸಭೆಯಲ್ಲಿ ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಶಾಸನತಂತ್ರದ ಕಾರ್ಯದರ್ಶಿ ಕೆ.ಪಿ. ಎಡಪ್ಪಾಡಿ, ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಮಂಜುನಾಥ ಸುವರ್ಣಗದ್ದೆ, ಪ್ರಧಾನ ಸಂಯೋಜಕ ಚಂದನ್ ಶಾಸ್ತ್ರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ವರದಿ: ಸಂದೇಶ ತಲಕಾಲಕೊಪ್ಪ, ಶ್ರೀಸಂಯೋಜಕ (ಮಾಧ್ಯಮ)

About The Author

error: Content is protected !!