July 27, 2026

ಮೃತರ ಮನೆಗೆ ಸಂತಾಪ ಸೂಚಿಸಲು ತೆರಳಿದ್ದ ಕುಟುಂಬದ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಪ್ರಕರಣ

ಭಟ್ಕಳ: ತಾಲೂಕಿನ ಬೆಳಕೆ ಗ್ರಾಮದಲ್ಲಿ ಮೃತರ ಮನೆಗೆ ಸಂತಾಪ ಸೂಚಿಸಲು ತೆರಳಿದ್ದ ಕುಟುಂಬದ ಸದಸ್ಯರ ಮೇಲೆ ಮಾಟ-ಮಂತ್ರದ ಆರೋಪ ಮಾಡಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಕೆ ಗ್ರಾಮದ ಜ್ಯೋತಿ ಮಂಜುನಾಥ ನಾಯ್ಕ ನೀಡಿದ ದೂರಿನ ಮೇರೆಗೆ, ಹೊನ್ನೆಮಡಿ ಗ್ರಾಮದ ದೇವಿದಾಸ ಮಾದೇವ ನಾಯ್ಕ್ (42) ಹಾಗೂ ವೆಂಕಟೇಶ್ ಮಾದೇವ ನಾಯ್ಕ್ (37) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ದೂರಿನ ಪ್ರಕಾರ, ಆರೋಪಿಗಳ ತಂದೆ ನಾಲ್ಕು ದಿನಗಳ ಹಿಂದೆ ಮೃತಪಟ್ಟಿದ್ದು, ಜ್ಯೋತಿ ಅವರ ಪತಿ, ಅವರ ಅಕ್ಕ ಹಾಗೂ ಅಕ್ಕನ ಪತಿ ಮೃತರ ಮನೆಗೆ ಸಂತಾಪ ಸೂಚಿಸಲು ತೆರಳಿದ್ದರು. ಈ ವೇಳೆ ಮೊದಲ ಆರೋಪಿ ದೇವಿದಾಸ ನಾಯ್ಕ್, “ನೀವು ಮಾಟ-ಮಂತ್ರ ಮಾಡಿಸಿ ನಮ್ಮ ತಂದೆಯ ಸಾವಿಗೆ ಕಾರಣರಾಗಿದ್ದೀರಿ” ಎಂದು ಆರೋಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, “ಇನ್ನು ಮುಂದೆ ನಮ್ಮ ಮನೆಗೆ ಬರಬೇಡಿ” ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಈ ವಿಚಾರವಾಗಿ ಜ್ಯೋತಿ ಅವರ ಪತಿ ಪ್ರಶ್ನಿಸಿದಾಗ, ಎರಡನೇ ಆರೋಪಿ ವೆಂಕಟೇಶ್ ನಾಯ್ಕ್ ಕೈಯಿಂದ ಹಲ್ಲೆ ನಡೆಸಿ ತಳ್ಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಮೊದಲ ಆರೋಪಿ ದೇವಿದಾಸ ನಾಯ್ಕ್ ತನ್ನ ಕಾರಿನಲ್ಲಿದ್ದ ಸ್ಟೀಲ್ ರಾಡ್ ತೆಗೆದುಕೊಂಡು ಜ್ಯೋತಿ ಅವರ ಪತಿಯ ತಲೆಯ ಎಡಭಾಗಕ್ಕೆ ಹೊಡೆದು ಗಾಯಪಡಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಹಲ್ಲೆ ತಡೆಯಲು ಮುಂದಾದ ಜ್ಯೋತಿ ಅವರ ಮೇಲೆಯೂ ಆರೋಪಿಗಳು ಹಲ್ಲೆ ನಡೆಸಿದ್ದು, ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಗಾಯಗೊಂಡವರು ಚಿಕಿತ್ಸೆ ಪಡೆದಿದ್ದು, ಜ್ಯೋತಿ ಮಂಜುನಾಥ ನಾಯ್ಕ ನೀಡಿದ ದೂರಿನ ಆಧಾರದಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

About The Author

error: Content is protected !!