ಭಟ್ಕಳ: ತಾಲೂಕಿನಲ್ಲಿ ಸಿಎನ್‌ಜಿ (CNG) ಗ್ಯಾಸ್ ಕೊರತೆ ಹಾಗೂ ಅಸಮರ್ಪಕ ರಸ್ತೆ ಕಾಮಗಾರಿಯಿಂದ ಆಟೋ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಭಟ್ಕಳ ರಿಕ್ಷಾ ಚಾಲಕರ ಸಂಘದ ವತಿಯಿಂದ ಉಪವಿಭಾಗದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಸಿಎನ್‌ಜಿ ಗ್ಯಾಸ್ ಸಮರ್ಪಕ ಪೂರೈಕೆಗೆ ಆಗ್ರಹ: ಭಟ್ಕಳದ ಭಾರತ ಪೆಟ್ರೋಲ್ ಬಂಕ್‌ನಲ್ಲಿರುವ ತಾಲೂಕಿನ ಏಕೈಕ ಸಿಎನ್‌ಜಿ ಪಂಪ್‌ನಲ್ಲಿ ಸರಿಯಾಗಿ ಗ್ಯಾಸ್ ಸಿಗದೆ ಆಟೋ ಚಾಲಕರು ಗಂಟೆಗಟ್ಟಲೆ ಸಾಲಿನಲ್ಲಿ ಕಾಯುವಂತಾಗಿದೆ. ಇದರಿಂದ ಸಮಯ ವ್ಯರ್ಥವಾಗಿ, ದಿನದ ಬಾಡಿಗೆಗಳು ಕೈತಪ್ಪಿ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಆದ್ದರಿಂದ ಗ್ಯಾಸ್ ಬಂದಾಗ ಆಟೋಗಳಿಗೆ ಮೊದಲ ಆದ್ಯತೆ ನೀಡಬೇಕು ಮತ್ತು ಬಂಕ್‌ಗೆ ನಿಯಮಿತ ಗ್ಯಾಸ್ ಪೂರೈಸಲು ಸೂಚಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಮನವಿ: ಐಆರ್‌ಬಿ (IRB) ನಡೆಸುತ್ತಿರುವ ಹೆದ್ದಾರಿ ಹಾಗೂ ಸರ್ವಿಸ್ ರಸ್ತೆಗಳ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಆಟೋ ಸೇರಿದಂತೆ ಇತರ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ತಕ್ಷಣ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.
ಮನವಿ ಸಲ್ಲಿಕೆ ಸಂದರ್ಭದಲ್ಲಿ ರಿಕ್ಷಾ ಯೂನಿಯನ್ ಅಧ್ಯಕ್ಷ ವೆಂಕಟೇಶ ನಾಯ್ಕ್, ಉಪಾಧ್ಯಕ್ಷ ಫಯಾಜ್, ಕಾರ್ಯದರ್ಶಿ ಮಾದೇವ ನಾಯ್ಕ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಲೀಮ್ ಮಹಮ್ಮದ್, ಲೋಕೇಶ್ ನಾಯ್ಕ್, ಮುರ್ಡೇಶ್ವರ ಯೂನಿಯನ್ ಅಧ್ಯಕ್ಷ ಶ್ರೀಧರ್ ನಾಯ್ಕ, ವಿನಾಯಕ, ಪ್ರಮೋದ್ ಹಾಗೂ ಇತರರು ಉಪಸ್ಥಿತರಿದ್ದರು.

About The Author


More Stories
ಯುವಕರಲ್ಲಿ ಕ್ರೀಡಾ ಪ್ರೇಮ ಬೆಳೆಸಿಕೊಳ್ಳಬೇಕು: ರಾಜು ಮಂಜಪ್ಪ ನಾಯ್ಕ
ಅನಾಥವಾಗಿ ಕೊನೆಯುಸಿರೆಳೆದ ಭಿಕ್ಷುಕ: ಕುಟುಂಬಸ್ಥರು ಬಾರದ ಹಿನ್ನೆಲೆ ಸಮಾಜ ಸೇವಕರಿಂದ ಅಂತ್ಯಕ್ರಿಯೆ
ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ