September 8, 2026

ರೈತರ ಕೃಷಿ ರಸ್ತೆಗೆ ಅಡ್ಡಿ ಆರೋಪ: ತಹಶೀಲ್ದಾರ್ ಕಚೇರಿಗೆ ಮನವಿ

ಭಟ್ಕಳ: ತಾಲೂಕಿನ ಮುರುಡೇಶ್ವರ ಗ್ರಾಮದ ಮಾವಳ್ಳಿ-2 ಕ್ಷೇತ್ರದ ಬೈಲಹೊಳೆ ಕಟ್ಟೆ ಸಮೀಪ ರೈತರು ಕೃಷಿ ಭೂಮಿಗೆ ತೆರಳುವ ರಸ್ತೆಗೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಉಪ ತಹಶೀಲ್ದಾರ್ ರಜಿನಿ ದೇವಡಿಗ್ ಅವರಿಗೆ ರೈತರು ಮನವಿ ಸಲ್ಲಿಸಿದರು.

ಸುಮಾರು 10 ವರ್ಷಗಳ ಹಿಂದೆ ₹50 ಲಕ್ಷ ಸರ್ಕಾರಿ ವೆಚ್ಚದಲ್ಲಿ ಸಣ್ಣ ಹಳ್ಳದ ಎರಡೂ ಬದಿಯ ಜಮೀನುಗಳಿಗೆ ಸಂಪರ್ಕ ಕಲ್ಪಿಸಲು ಈ ರಸ್ತೆ ನಿರ್ಮಿಸಲಾಗಿತ್ತು. ಟ್ರ್ಯಾಕ್ಟರ್, ಟಿಲ್ಲರ್ ಹಾಗೂ ಕೊಯ್ಲು ಯಂತ್ರಗಳ ಸಂಚಾರಕ್ಕೆ ಇದು ಪ್ರಮುಖ ಮಾರ್ಗವಾಗಿದೆ.

ಪ್ರಸ್ತುತ ಹಳ್ಳದ ತಡೆಗೋಡೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಸರ್ವೇ ನಂಬರ್ 192/3, 193/2 ಮತ್ತು 194/3ರ ಜಮೀನು ಮಾಲೀಕರು ರಸ್ತೆ ಬಂದ್ ಮಾಡಲು ಯತ್ನಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ರಸ್ತೆ ಬಂದ್ ಆದರೆ ಯಂತ್ರೋಪಕರಣ ಹಾಗೂ ಬೆಳೆ ಸಾಗಣೆಗೆ ತೊಂದರೆಯಾಗಿ ಆರ್ಥಿಕ ನಷ್ಟ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಕೃಷಿ ಚಟುವಟಿಕೆಗೆ ಅಡಚಣೆಯಾಗದಂತೆ ರಸ್ತೆ ಸಂಪರ್ಕವನ್ನು ಕಾಯ್ದುಕೊಳ್ಳಲು ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

    ಮನವಿ ಸಲ್ಲಿಕೆ ವೇಳೆ ಮಧು ನಾಯ್ಕ, ಸಂತೋಷ್ ನಾಯ್ಕ, ಭಾಸ್ಕರ್ ನಾಯ್ಕ, ಮಾರುತಿ ನಾರಾಯಣ ಮೊಗೇರ, ನಾಗಪ್ಪ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    About The Author

    error: Content is protected !!