ಭಟ್ಕಳ: ಭಟ್ಕಳ ನಗರ ಹಾಗೂ ರೈಲು ನಿಲ್ದಾಣದ ಸುತ್ತಮುತ್ತ ಭಿಕ್ಷಾಟನೆ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಅಂಗವಿಕಲ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಮೃತಪಟ್ಟಿದ್ದು, ಕುಟುಂಬಸ್ಥರು ಬಾರದ ಹಿನ್ನೆಲೆಯಲ್ಲಿ ಸಮಾಜ ಸೇವಕರೇ ಅಂತ್ಯಕ್ರಿಯೆ ನೆರವೇರಿಸಿದ ಘಟನೆ ನಡೆದಿದೆ.
ಆಂಧ್ರಪ್ರದೇಶದ ವೆಲಗೂಡು ನಿವಾಸಿ ದೊದೆಕೊಲಾ ಬುಕಾರಿ (56) ಮೃತಪಟ್ಟವರು. ಅಂಗವಿಕಲರಾಗಿದ್ದ ಇವರ ಗಂಭೀರ ಅನಾರೋಗ್ಯ ಸ್ಥಿತಿಯನ್ನು ಗಮನಿಸಿ ಸಮಾಜ ಸೇವಕ ಮಂಜು ನಾಯ್ಕ ಮುಟ್ಟಳ್ಳಿ ಅವರು ಆ.28ರಂದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಆ.30ರಂದು ಅವರು ಕೊನೆಯುಸಿರೆಳೆದರು.
ಶವಾಗಾರದಲ್ಲಿದ್ದ ಮೃತದೇಹವನ್ನು ಪಡೆಯಲು ಆಂಧ್ರಪ್ರದೇಶದಲ್ಲಿರುವ ಮೃತರ ಕುಟುಂಬಸ್ಥರಿಗೆ ಪೊಲೀಸರು ದೂರವಾಣಿ ಮೂಲಕ ಮಾಹಿತಿ ನೀಡಿದರೂ, ಎಂಟು ದಿನ ಕಳೆದರೂ ಯಾರೊಬ್ಬರೂ ಆಗಮಿಸಲಿಲ್ಲ.
ಈ ಹಿನ್ನೆಲೆಯಲ್ಲಿ ಪಿಎಸ್ಐ ಸೋಮನಾಥ ರಾಠೋಡ ಹಾಗೂ ಸಿಬ್ಬಂದಿಗಳ ಸಮ್ಮುಖದಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿ, ಸಮಾಜ ಸೇವಕರಾದ ಮಂಜು ನಾಯ್ಕ ಮುಟ್ಟಳ್ಳಿ, ಲಕ್ಷ್ಮೀಶ ನಾಯ್ಕ, ಮೋಹನ್ ದೇವಾಡಿಗ, ಅಂಬುಲೆನ್ಸ್ ಚಾಲಕ ಮಾರುತಿ ನಾಯ್ಕ ಹಾಗೂ ಪುರಸಭೆಯ ಪೌರಕಾರ್ಮಿಕರ ಸಹಕಾರದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ತಮ್ಮ ಭಿಕ್ಷಾಟನೆ ಹಾಗೂ ಮಾಸಾಶನದ ಹಣವನ್ನು ಕುಟುಂಬಕ್ಕೆ ನೀಡುತ್ತಿದ್ದ ಬುಕಾರಿ ಅವರ ಕೊನೆಯ ದಿನಗಳಲ್ಲಿ ಹಾಗೂ ಅಂತ್ಯಕ್ರಿಯೆಯಲ್ಲೂ ಕುಟುಂಬಸ್ಥರು ಭಾಗಿಯಾಗದಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.
About The Author


More Stories
ಯುವಕರಲ್ಲಿ ಕ್ರೀಡಾ ಪ್ರೇಮ ಬೆಳೆಸಿಕೊಳ್ಳಬೇಕು: ರಾಜು ಮಂಜಪ್ಪ ನಾಯ್ಕ
ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ
ಜಾಲಿಯಲ್ಲಿ ‘ಕೃಷ್ಣ ಲೀಲಾ–02’: ಪುಟಾಣಿಗಳ ಕೃಷ್ಣ ವೇಷಧಾರಿ ಸ್ಪರ್ಧೆ ಹಾಗೂ ₹30 ಸಾವಿರಕ್ಕೂ ಅಧಿಕ ಬಹುಮಾನ ವಿತರಣೆ