September 22, 2026

ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಯೋಗ ಕಾರ್ಯಾಗಾರದ ಸಮಾರೋಪ

ಭಟ್ಕಳ: ಇಲ್ಲಿನ ಭಟ್ಕಳ ಎಜುಕೇಶನ್ ಟ್ರಸ್ಟ್‌ನ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಶ್ರೀಮತಿ ವಿದ್ಯಾ ರಮೇಶ್ ಶಾನಭಾಗ ಸಭಾಂಗಣದಲ್ಲಿ “ನಮ್ಮ ಶಿಕ್ಷಕರು, ನಮ್ಮ ಹೆಮ್ಮೆ” ಪರಿಕಲ್ಪನೆಯೊಂದಿಗೆ ಶಿಕ್ಷಕರ ದಿನಾಚರಣೆ, ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಯೋಗ ಕಾರ್ಯಾಗಾರದ ಸಮಾರೋಪ ಸಮಾರಂಭ ನೆರವೇರಿತು.

ಕಾರ್ಯಕ್ರಮ ಉದ್ಘಾಟಿಸಿದ ಶಿರಾಲಿಯ ಖ್ಯಾತ ಯೋಗ ಗುರು ಡಾ. ಗೋವಿಂದ ದೇವಾಡಿಗ, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಲು ಯೋಗ ಪ್ರಮುಖ ಸಾಧನವಾಗಿದ್ದು ಪ್ರತಿಯೊಬ್ಬರೂ ಯೋಗಾಭ್ಯಾಸ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿ, ಭಟ್ಕಳ ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀನಾಥ್ ಪೈ ಮಾತನಾಡಿ, ಇಂದಿನ ತಾಂತ್ರಿಕ ಯುಗಕ್ಕೆ ತಕ್ಕಂತೆ ಬೋಧನಾ ಕೌಶಲ್ಯಗಳನ್ನು ಬೆಳೆಸಿಕೊಂಡಾಗ ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ ಎಂದರು.

ಗೌರವಾನ್ವಿತ ಅತಿಥಿ, ಗುಜ್ಜಾಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಅನಂತ ಆಚಾರ್ಯ, ನಿರಂತರ ಶ್ರದ್ಧೆ ಹಾಗೂ ಪ್ರಯತ್ನವೇ ಯಶಸ್ಸಿಗೆ ಹಾದಿ ಎಂದು ತಿಳಿಸಿದರು.

80ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಎಜುಕೇಶನ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ರಾಜೇಶ್ ನಾಯಕ, ಸಮಾಜದಲ್ಲಿ ಶಿಕ್ಷಕರ ಪಾತ್ರ ಹಾಗೂ ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಕುರಿತು ಮಾತನಾಡಿದರು. ಟ್ರಸ್ಟಿ ಮ್ಯಾನೇಜರ್ ನಾಗೇಶ್ ಎಂ. ಭಟ್ ಶುಭ ಹಾರೈಸಿದರು.

    ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಭಟ್ಟ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಗಜಾನನ ಶಾಸ್ತ್ರಿ ವಂದನಾರ್ಪಣೆ ಮಾಡಿದರು. ಪ್ರಶಿಕ್ಷಣಾರ್ಥಿಗಳಾದ ನೇತ್ರಾವತಿ ಹಾಗೂ ಯೋಗಿತಾ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    About The Author

    error: Content is protected !!