September 23, 2026

ಬರ್ಗಿ ಪ್ರೌಢ ಶಾಲೆಯ ಸಂಸ್ಕೃತ ವಿದ್ಯಾರ್ಥಿಗಳಿಗೆ ವಾಟರ್ ಬಾಟಲ್ ಕೊಡುಗೆ

ಕುಮಟಾ: ತಾಲೂಕಿನ ಬರ್ಗಿಯ ಸರ್ಕಾರಿ ಪ್ರೌಢಶಾಲೆಯ ಸಂಸ್ಕೃತ ವಿದ್ಯಾರ್ಥಿಗಳಿಗೆ “ದೇವ ದೀಪಿಕಾ – ಸಂಸ್ಕೃತ ಮಂದಿರ”ದಲ್ಲಿ ಉಚಿತವಾಗಿ ಗುಣಮಟ್ಟದ ವಾಟರ್ ಬಾಟಲ್‌ಗಳನ್ನು ವಿತರಿಸಲಾಯಿತು.

ಬೆಂಗಳೂರಿನಲ್ಲಿ ನೆಲೆಸಿರುವ ಬರ್ಗಿ ಮೂಲದ ವಿದ್ಯಾಭಿಮಾನಿ ಹಾಗೂ ದಾನಿ ಅನಂತರಾಜ ಸೀತಾರಾಮ ಹಂದೆ (“ಸುಜನ ಸಿಂಧು”) ಅವರು ಈ ಕೊಡುಗೆಯ ಪ್ರಾಯೋಜಕತ್ವ ವಹಿಸಿದ್ದರು. 2021 ರಲ್ಲಿ ಸ್ಥಾಪನೆಗೊಂಡ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದ ಮೂಲಕ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸಂಸ್ಕೃತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ 6ನೇ ಕೊಡುಗೆ ಇದಾಗಿದೆ.

ವಿದ್ಯಾಪೀಠದ ನಿರಂತರ ಪ್ರೋತ್ಸಾಹ: ಬರ್ಗಿ ಪ್ರೌಢಶಾಲೆಯಲ್ಲಿ ಸಂಸ್ಕೃತ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠವು ದಾನಿಗಳ ನೆರವಿನಿಂದ ಪ್ರತಿವರ್ಷ ವಿವಿಧ ವಸ್ತುಗಳನ್ನು ವಿತರಿಸುತ್ತಾ ಬಂದಿದೆ. ಈ ವರ್ಷ ಈಗಾಗಲೇ ನೋಟ್‌ಬುಕ್, ಕೊಡೆ, ಬ್ಯಾಗ್, ವಾಚ್ ಹಾಗೂ ತಾಟುಗಳನ್ನು ನೀಡಲಾಗಿದ್ದು, ಮುಂದೆಯೂ ಹಲವು ಕೊಡುಗೆಗಳನ್ನು ನೀಡುವ ಯೋಜನೆಯಿದೆ.

ದಾನಿಗಳು ಹಾಗೂ ಗಣ್ಯರ ಮೆಚ್ಚುಗೆ: ದಾನಿ ಅನಂತರಾಜ ಹಂದೆ ಮಾತನಾಡಿ, “ಬರ್ಗಿ ಪ್ರೌಢಶಾಲೆಯಲ್ಲಿ ಗುಣಾತ್ಮಕ ಕಲಿಕೆ ನಡೆಯುತ್ತಿದ್ದು, ಸಂಸ್ಕೃತ ಶಿಕ್ಷಕ ಮಂಜುನಾಥ ಗಾಂವಕರ್ ಅವರ ಕಳಕಳಿಯಿಂದಾಗಿ ಈ ಶಾಲೆ ‘ಉತ್ತರ ಕನ್ನಡದ ಸಂಸ್ಕೃತ ಕಾಶಿ’ಯಾಗಿ ಹೊರಹೊಮ್ಮಿದೆ. ಸಂಸ್ಕೃತದಂತೆ ಇತರ ವಿಷಯಗಳಿಗೂ ಸಾರ್ವಜನಿಕರು ನೆರವು ನೀಡಬೇಕು” ಎಂದು ಆಶಿಸಿದರು. ಸಂತ ಸೇವಾಲಾಲ ಸಂಘದ ಅಧ್ಯಕ್ಷ ಶಿವಚಂದ್ರ, ‘ಕನ್ನಡ ಭಾರತಿ ಪ್ರಪಂಚ’ದ ಸಂಚಾಲಕ ನಾರಾಯಣ ನಾಗು ನಾಯಕ ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ ಕೃಷ್ಣ ನಾಯ್ಕ ದಾನಿಗಳ ಸಂಸ್ಕೃತ ಪ್ರೀತಿ ಹಾಗೂ ವಿದ್ಯಾಪೀಠದ ಸೇವೆಯನ್ನು ಶ್ಲಾಘಿಸಿದರು.

ವಿದ್ಯಾರ್ಥಿಗಳ ಸ್ಪಂದನೆ: ಶಾಲೆಯ ಸಂಸ್ಕೃತ ಶಿಕ್ಷಕ ಮಂಜುನಾಥ ಗಾಂವಕರ್ ಅವರ ಪರಿಣಾಮಕಾರಿ ಬೋಧನೆ ಹಾಗೂ ದಾನಿಗಳಿಂದ ಸಿಗುತ್ತಿರುವ ನಿರಂತರ ಪ್ರೋತ್ಸಾಹದಿಂದಾಗಿ ಸಂಸ್ಕೃತ ಕಲಿಯಲು ಹೆಚ್ಚಿನ ಆಸಕ್ತಿ ಮೂಡುತ್ತಿದೆ ಎಂದು ವಿದ್ಯಾರ್ಥಿಗಳಾದ ನಾಗೇಂದ್ರ ಹರಿಕಂತ್ರ, ಧನುಷ್ ಪಟಗಾರ, ರೇಣುಕಾ ಗುನಗಾ ಹಾಗೂ ವಿಘ್ನೇಶ ಪಟಗಾರ ಹರ್ಷ ವ್ಯಕ್ತಪಡಿಸಿದರು.

    About The Author

    error: Content is protected !!