ಬರ್ಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ; ಸ್ಪರ್ಧಾ ವಿಜೇತರಿಗೆ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಬಹುಮಾನ ವಿತರಣೆ
ಕುಮಟಾ (ಉತ್ತರ ಕನ್ನಡ): ಪಂಡಿತ್ ಜವಾಹರಲಾಲ್ ನೆಹರು ಅವರ ವಿಚಾರಧಾರೆಗಳು ಹಾಗೂ ಮಕ್ಕಳ ಕುರಿತಂತೆ ಅವರಿಗಿದ್ದ ಅಪಾರ ಪ್ರೀತಿ ಅವರನ್ನು ಅನನ್ಯ ವ್ಯಕ್ತಿತ್ವದ ನಾಯಕರನ್ನಾಗಿಸಿದೆ ಎಂದು ಬರ್ಗಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಮಧುಕೇಶ್ವರ ನಾಯ್ಕ ಅಭಿಪ್ರಾಯಪಟ್ಟರು.

ತಾಲೂಕಿನ ಬರ್ಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ‘ಮಕ್ಕಳ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಂಡಿತ್ ನೆಹರು ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ಅವರು ಮಾತನಾಡಿದರು. “ಸ್ವತಂತ್ರ ಭಾರತದ ಪ್ರಪ್ರಥಮ ಪ್ರಧಾನಿಯಾಗಿ 17 ವರ್ಷಗಳ ದೀರ್ಘಕಾಲದವರೆಗೆ ನೆಹರು ಅವರು ಸಲ್ಲಿಸಿದ ನಿಸ್ವಾರ್ಥ ಸೇವೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯವಾದುದು” ಎಂದು ಸ್ಮರಿಸಿದರು.

ದಿನಾಚರಣೆ ಪ್ರಯುಕ್ತ ದೈಹಿಕ ಶಿಕ್ಷಣ ಶಿಕ್ಷಕಿ ಶಾರದಾ ನಾಯ್ಕ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಹಾಗೂ ಮನರಂಜನಾ ಚಟುವಟಿಕೆಗಳನ್ನು ನಡೆಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಮಾನವ ಸರಪಳಿ ನಿರ್ಮಿಸಿ, ಶುಭ ಸಂದೇಶದೊಂದಿಗೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಹುಮಾನಗಳ ಪ್ರಾಯೋಜಕತ್ವವನ್ನು ಬರ್ಗಿ ಪ್ರೌಢಶಾಲೆಯ ಶ್ರೀ ಘಟಬೀರ ಪ್ರಸಾದಿತ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಾಗರಾಜ ಕೃಷ್ಣ ನಾಯ್ಕ ವಹಿಸಿದ್ದರು.
ಸಂಸ್ಕೃತ ಅಧ್ಯಾಪಕ ಮಂಜುನಾಥ ಗಾಂವಕರ್ ಬರ್ಗಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಸರಸ್ವತಿ ನಾಯಕ, ಗೀತಾ ಗೌಡ, ಯಶೋಧಾ ಕೆ.ಬಿ., ಗೀತಾ ನಾಗೇಕರ್, ಕಮಲಾಬಾಯಿ ಭಾಗ್ವತ್ ಹಾಗೂ ಸಿಬ್ಬಂದಿ ಫಿರೋಜ್ ಖಾನ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

More Stories
ಬರ್ಗಿ ಪ್ರೌಢಶಾಲೆಯಲ್ಲಿ ಸಂಪನ್ನಗೊಂಡ ರಾಜ್ಯಮಟ್ಟದ ‘ವಿವೇಕ ವಿದ್ಯಾರ್ಥಿ ಪರೀಕ್ಷೆ’
ವರ್ಗಾವಣೆಗೊಂಡ ಪತ್ರಾಂಕಿತ ವ್ಯವಸ್ಥಾಪಕ ದೇವದಾಸ ಜಾದವರಿಗೆ ಬೋಧಕರ ಸಂಘದಿಂದ ಆತ್ಮೀಯ ಸನ್ಮಾನ
ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಹೆಮ್ಮೆಯ ಕ್ರೀಡಾಪಟುಗಳು