October 22, 2026

ಅಕ್ರಮ ಮದ್ಯ ಮಾರಾಟ, ಓಸಿ-ಮಟಕಾ ವಿರುದ್ಧ ಪೊಲೀಸ್ ದಾಳಿ: ಎಎಸ್‌ಪಿ ರಾನು ಗುಪ್ತ ಎಚ್ಚರಿಕೆ

ಭಟ್ಕಳ: ತಾಲೂಕಿನಲ್ಲಿ ಓಸಿ-ಮಟಕಾ ಜೂಜಾಟ ಹಾಗೂ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕಾರ್ಯಾಚರಣೆ ಮುಂದುವರಿಸಲಿದೆ ಎಂದು ಭಟ್ಕಳ ಉಪವಿಭಾಗದ ಎಎಸ್‌ಪಿ ರಾನು ಗುಪ್ತ (ಐಪಿಎಸ್) ತಿಳಿಸಿದ್ದಾರೆ.

ಅಕ್ರಮ ಚಟುವಟಿಕೆಗಳ ವಿರುದ್ಧ ಸಮರ ಸಾರಿರುವ ಇಲಾಖೆಯು ಮುರುಡೇಶ್ವರ, ಭಟ್ಕಳ ನಗರ ಹಾಗೂ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಿರಂತರ ದಾಳಿ ನಡೆಸಿ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡಿದೆ.

ಮುರುಡೇಶ್ವರದಲ್ಲಿ ದಾಳಿ – ಮದ್ಯ ಜಪ್ತಿ: ಸೆಪ್ಟೆಂಬರ್ 19ರಂದು ಮುರುಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಎರಡು ಅಂಗಡಿಗಳ ಮೇಲೆ ದಾಳಿ ನಡೆಸಿದ ಪೊಲೀಸರು ₹32,345 ಮೌಲ್ಯದ ಮದ್ಯ ಹಾಗೂ ಬಿಯರ್ ವಶಪಡಿಸಿಕೊಂಡಿದ್ದಾರೆ.

ಮೊದಲ ಪ್ರಕರಣದಲ್ಲಿ ₹18,200 ಮೌಲ್ಯದ ಬಿಯರ್ ಬಾಟಲಿಗಳು, ಟಿನ್‌ಗಳು ಹಾಗೂ ವಿಸ್ಕಿ ಪೌಚ್‌ಗಳನ್ನು ಜಪ್ತಿ ಮಾಡಲಾಗಿದೆ.

ಎರಡನೇ ಪ್ರಕರಣದಲ್ಲಿ ₹14,145 ಮೌಲ್ಯದ ಬಿಯರ್ ಹಾಗೂ ವಿವಿಧ ಬ್ರ್ಯಾಂಡ್‌ಗಳ ಮದ್ಯದ ಟೆಟ್ರಾ ಪ್ಯಾಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಭಟ್ಕಳದಲ್ಲಿ 5 ಓಸಿ-ಮಟಕಾ ಪ್ರಕರಣ ದಾಖಲು: ಸೆಪ್ಟೆಂಬರ್ 21ರಂದು ಭಟ್ಕಳ ನಗರ ಹಾಗೂ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 5 ಓಸಿ-ಮಟಕಾ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದೇ ವೇಳೆ ಅಕ್ರಮ ಮದ್ಯ ಮಾರಾಟ ಸಂಬಂಧ ಮತ್ತೊಂದು ಪ್ರಕರಣ ದಾಖಲಿಸಿ ಮದ್ಯದ ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ.

    ಸಾರ್ವಜನಿಕರಲ್ಲಿ ಮನವಿ: ತಾಲೂಕಿನಲ್ಲಿ ಓಸಿ-ಮಟಕಾ ಅಥವಾ ಅಕ್ರಮ ಮದ್ಯ ಮಾರಾಟದಂತಹ ಚಟುವಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು. ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ಎಎಸ್‌ಪಿ ರಾನು ಗುಪ್ತ ಭರವಸೆ ನೀಡಿದ್ದಾರೆ.

    About The Author

    error: Content is protected !!