October 23, 2026

ಬೆಳಕೆ ವ್ಯವಸಾಯ ಸಹಕಾರಿ ಸಂಘಕ್ಕೆ ₹1.27 ಕೋಟಿ ನಿವ್ವಳ ಲಾಭ: ಶೇ. 8ರಷ್ಟು ಲಾಭಾಂಶ ಘೋಷಣೆ

ಭಟ್ಕಳ: ತೀವ್ರ ಪೈಪೋಟಿಯ ನಡುವೆಯೂ ಬೆಳಕೆ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ ₹308.59 ಕೋಟಿ ವಹಿವಾಟು ನಡೆಸಿ ₹1.27 ಕೋಟಿ ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಶೇ.8ರಷ್ಟು ಲಾಭಾಂಶ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಮಾದೇವ ಗೋವಿಂದ ನಾಯ್ಕ ಪ್ರಕಟಿಸಿದರು.

ಸಂಘದ 74ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 2025-26ನೇ ಸಾಲಿನ ವಾರ್ಷಿಕ ವರದಿ ಮಂಡಿಸಿ ಅವರು ಮಾತನಾಡಿದರು.

ಸದಸ್ಯತ್ವ ಹಾಗೂ ಬಂಡವಾಳ: ಸಂಘವು ಪ್ರಸಕ್ತ ಸಾಲಿನ ಅಂತ್ಯಕ್ಕೆ 8,677 ಸದಸ್ಯರನ್ನು ಹೊಂದಿದ್ದು, ₹6.59 ಕೋಟಿ ಶೇರು ಬಂಡವಾಳ ಹೊಂದಿದೆ.

ಠೇವಣಿ ಹಾಗೂ ಸಾಲ: ವಿವಿಧ ನಿಧಿಗಳಲ್ಲಿ ₹13.69 ಕೋಟಿ, ₹89.51 ಕೋಟಿ ಠೇವಣಿ ಹಾಗೂ ₹118.74 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ಸದಸ್ಯರಿಂದ ₹109.93 ಕೋಟಿ ಸಾಲದ ಮೊತ್ತ ವಸೂಲಿಯಾಗಬೇಕಿದೆ.

ಸ್ವಸಹಾಯ ಸಂಘಗಳು: ಸಂಘದ ವ್ಯಾಪ್ತಿಯ 205 ಸ್ವಸಹಾಯ ಸಂಘಗಳಿಂದ ₹83.36 ಲಕ್ಷ ಠೇವಣಿ ಸಂಗ್ರಹವಾಗಿದ್ದು, ಪ್ರಸಕ್ತ ಸಾಲಿನಲ್ಲಿ ₹86.74 ಲಕ್ಷ ಸಾಲ ವಿತರಿಸಲಾಗಿದೆ.

ಸೌಲಭ್ಯಗಳು ಹಾಗೂ ಪ್ರಶಸ್ತಿ ಪ್ರದಾನ:

ಮುಖ್ಯಶಾಖೆಯಲ್ಲಿ ಲಾಕರ್ ಮತ್ತು ಇ-ಸ್ಟಾಂಪಿಂಗ್ ಸೌಲಭ್ಯ ಕಲ್ಪಿಸಲಾಗಿದ್ದು, ಮುರ್ಡೇಶ್ವರ ಹಾಗೂ ಭಟ್ಕಳದಲ್ಲಿ ನೂತನ ಶಾಖೆಗಳನ್ನು ಆರಂಭಿಸಲಾಗಿದೆ. ಕೇಂದ್ರ ಕಚೇರಿ ಎದುರು ಬಸ್ ತಂಗುದಾಣ ನಿರ್ಮಿಸಲಾಗಿದೆ.

ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶ್ರೇಷ್ಠ ಸಾಧನೆ ಮಾಡಿದ 61 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

      ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಪಾಂಡು ಗೋವಿಂದ ನಾಯ್ಕ, ನಿರ್ದೇಶಕರಾದ ಲಕ್ಷ್ಮೀನಾರಾಯಣ ಮಂಜಯ್ಯ ನಾಯ್ಕ, ನಾಗೇಶ ಡಿ. ನಾಯ್ಕ, ದಾಮೋದರ ಹೊನ್ನಪ್ಪ ನಾಯ್ಕ, ಲೋಕೇಶ ಮಂಜುನಾಥ ನಾಯ್ಕ, ರವಿರಾಜ ಜೀನದತ್ತ ಜೈನ್, ಮಂಜು ಮೊಗೇರ, ಭಾಸ್ಕರ ನಾರಾಯಣ ಗೊಂಡ, ಲಲಿತಾ ಕೊರ್ಗ ನಾಯ್ಕ, ಶಾರದಾ ಚಂದ್ರ ನಾಯ್ಕ ಹಾಗೂ ಭಾರತಿ ರವಿ ನಾಯ್ಕ ಉಪಸ್ಥಿತರಿದ್ದರು.

      ಮುಖ್ಯ ಕಾರ್ಯನಿರ್ವಾಹಕ ಅಣ್ಣಪ್ಪ ಎನ್. ನಾಯ್ಕ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕ ನಾಗೇಶ ಎಂ. ನಾಯ್ಕ ವಂದನಾರ್ಪಣೆ ಮಾಡಿದರು.

      About The Author

      error: Content is protected !!