October 22, 2026

ಮಹಾರಾಷ್ಟ್ರದಲ್ಲಿ ಜನಮನಸೆಳೆದ ಕನ್ನಡಿಗರ ‘ಗಣಪತಿ ಬಪ್ಪ ಭಜನಾಮೃತ’

ಬೈಂದೂರು/ಭಟ್ಕಳ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಕೂಡಾಳ ತಾಲೂಕಿನ ಅಂದೋರ್ಲ ಗ್ರಾಮದಲ್ಲಿ, ಶ್ರೀ ಮಹೇಶ್ ವಿಠಲ ಸಾವಂತ್ ಅವರ ಮನೆಯಲ್ಲಿ ನಡೆಯುತ್ತಿರುವ 21 ದಿನಗಳ ಗಣೇಶೋತ್ಸವದ 19ನೇ ದಿನವಾದ ಅಂಗಾರಕ ಸಂಕಷ್ಟಿಯಂದು ಕರಾವಳಿಯ ಕಲಾವಿದರಿಂದ ವಿಶೇಷ ‘ಗಣಪತಿ ಬಪ್ಪ ಭಜನಾಮೃತ’ ಕಾರ್ಯಕ್ರಮ ಮೂಡಿಬಂತು.

ಹಿರಿಯ ಕಲಾವಿದ ಉಮೇಶ ಮೇಸ್ತ ಶಿರೂರು ಹಾಗೂ ತಂಡದವರು ನಡೆಸಿಕೊಟ್ಟ ಈ ಕಾರ್ಯಕ್ರಮವು ಸುಮಾರು ಮೂರು ಗಂಟೆಗಳ ಕಾಲ ಭಕ್ತರನ್ನು ಮಂತ್ರಮುಗ್ಧಗೊಳಿಸಿತು.

ಉಮೇಶ ಮೇಸ್ತ ಶಿರೂರು ಮರಾಠಿ ಭಕ್ತಿಗೀತೆಗಳನ್ನು ಹಾಡಿದರೆ, ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ-ಕವಿ ಉಮೇಶ ಮುಂಡಳ್ಳಿ ಭಟ್ಕಳ ಅವರು ಕನ್ನಡ ಹಾಗೂ ಹಿಂದಿ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ಸುದರ್ಶನ ಮೇಸ್ತ ಶಿರೂರು ಸಹಗಾಯನ ನೀಡಿದರು.

ವಾದ್ಯ ವೃಂದ: ಹರೀಶ್ ಶೇಟ್ ಕುಮಟಾ (ತಬಲಾ), ನವೀನ್ ಶೇಟ್ ಹೊನ್ನಾವರ (ಕೀಬೋರ್ಡ್), ಶ್ಯಾಮ್ ಮೇಸ್ತ ಶಿರೂರು (ಪಖವಾಜ್) ಹಾಗೂ ಕುಮಾರ್ ಮೇಸ್ತ ಶಿರೂರು (ತಾಳ) ಸಾಥ್ ನೀಡಿದರು.

ಕೂಡಾಳದಲ್ಲಿ ‘ಜಗನ್ನಾಥ್ ಸಂಗೀತ ವಿದ್ಯಾಲಯ’ ನಡೆಸುತ್ತಿರುವ ಹಿರಿಯ ಪಖವಾಜ್ ವಾದಕ ಮಹೇಶ್ ಸಾವಂತ್ ಅವರು ಕರ್ನಾಟಕದ ಎಲ್ಲಾ ಕಲಾವಿದರನ್ನು ಸನ್ಮಾನಿಸಿ ಗೌರವಿಸಿದರು.

ಕಳೆದ ನಾಲ್ಕು ವರ್ಷಗಳಿಂದ ಈ ಕ್ಷೇತ್ರದಲ್ಲಿ ನಿರಂತರವಾಗಿ ಕಾರ್ಯಕ್ರಮ ನೀಡುತ್ತಿರುವ ಉಮೇಶ ಮೇಸ್ತ ಹಾಗೂ ತಂಡದ ಕನ್ನಡ, ಮರಾಠಿ ಮತ್ತು ಹಿಂದಿ ಭಕ್ತಿಗೀತೆಗಳ ತ್ರಿವೇಣಿ ಸಂಗಮಕ್ಕೆ ಸ್ಥಳೀಯ ಭಕ್ತರಿಂದ ಅಪಾರ ಮೆಚ್ಚುಗೆ ವ್ಯಕ್ತವಾಯಿತು.

    About The Author

    error: Content is protected !!