October 23, 2026

ಮುರಿನಕಟ್ಟೆ ಪ್ರಕರಣ: ಚಾರ್ಜ್‌ಶೀಟ್‌ನಲ್ಲಿ ಶ್ರೀಕಾಂತ್ ನಾಯ್ಕ್ ಹೆಸರು ಸೇರ್ಪಡೆಗೆ ಬಿಜೆಪಿ ತೀವ್ರ ಆಕ್ರೋಶ

17 ಕಾರ್ಯಕರ್ತರಿಗೆ ಉಚಿತ ಕಾನೂನು ನೆರವು; ಮುರಿನಕಟ್ಟೆ ಶೀಘ್ರ ಮರುನಿರ್ಮಾಣಕ್ಕೆ ಆಗ್ರಹ

ಭಟ್ಕಳ: ಮುರಿನಕಟ್ಟೆ ಮರುನಿರ್ಮಾಣ ಹಾಗೂ ಅದಕ್ಕೆ ಸಂಬಂಧಿಸಿದ ಪ್ರತಿಭಟನೆ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಎಫ್‌ಐಆರ್‌ನಲ್ಲಿ ಹೆಸರು ಇಲ್ಲದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ನಾರಾಯಣ ನಾಯ್ಕ ಅವರ ಹೆಸರನ್ನು ಪೊಲೀಸರು ಸೇರ್ಪಡೆಗೊಳಿಸಿರುವುದನ್ನು ಖಂಡಿಸಿ ಬಿಜೆಪಿ ಮುಖಂಡರು ಗುರುವಾರ ಆಸರಕೇರಿ ವೆಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದರು.

ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ದ್ವಂದ್ವ ನೀತಿ ಹಾಗೂ ತಾರತಮ್ಯ ಅನುಸರಿಸುತ್ತಿದ್ದಾರೆ ಎಂದು ಮುಖಂಡರು ಆರೋಪಿಸಿದರು.

ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ: ಮಾಜಿ ಸಚಿವ ಶಿವಾನಂದ ನಾಯ್ಕ ಮಾತನಾಡಿ, ಎಫ್‌ಐಆರ್‌ನಲ್ಲಿ ಹೆಸರು ಇಲ್ಲದ ಶ್ರೀಕಾಂತ್ ನಾಯ್ಕ್ ಅವರನ್ನು ಚಾರ್ಜ್‌ಶೀಟ್‌ನಲ್ಲಿ ಸೇರಿಸಿರುವುದು ಖಂಡನೀಯ. ಸ್ಥಳೀಯ ಶಾಸಕರ ಒತ್ತಡದಿಂದ ಪೊಲೀಸ್ ಇಲಾಖೆ ತಾರತಮ್ಯವೆಸಗುತ್ತಿದ್ದು, ಈ ನಡೆ ಮುಂದುವರಿದಲ್ಲಿ ಇಲಾಖೆಯ ವಿರುದ್ಧವೇ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕಳಪೆ ಕಾಮಗಾರಿ ಆರೋಪ: ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ಈಶ್ವರ ನಾಯ್ಕ ಮಾತನಾಡಿ, ಮುರಿನಕಟ್ಟೆ ಧ್ವಂಸ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸದೆ, ಪ್ರತಿಭಟನೆ ನಡೆಸಿದ ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಮರುನಿರ್ಮಾಣ ಕಾಮಗಾರಿಯಲ್ಲಿ ಸುಮಾರು ₹10 ಲಕ್ಷದ ಕೆಲಸವನ್ನು ₹80 ಲಕ್ಷ ಎಂದು ತೋರಿಸಿ ಕಳಪೆ ಕಾಮಗಾರಿ ನಡೆಸಲಾಗಿದೆ ಎಂದು ಆರೋಪಿಸಿದರು.

ಪೊಲೀಸರ ನಡೆಗೆ ಪ್ರಶ್ನೆ: ಮಾಜಿ ನಿಗಮ ಮಂಡಳಿ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ಮುರಿನಕಟ್ಟೆ ಧ್ವಂಸ ಪ್ರಕರಣದ ಎಫ್‌ಐಆರ್‌ನಲ್ಲಿ ಇಮ್ರಾನ್ ಲಂಕಾ ಅವರ ಹೆಸರು ಇದ್ದರೂ ಚಾರ್ಜ್‌ಶೀಟ್‌ನಲ್ಲಿ ಕೈಬಿಡಲಾಗಿದೆ. ಆದರೆ ಶ್ರೀಕಾಂತ್ ನಾಯ್ಕ್ ಅವರ ಹೆಸರು ಸೇರಿಸಲಾಗಿದೆ. ಈ ಗೊಂದಲಗಳಿಗೆ ಪೊಲೀಸರು ಸ್ಪಷ್ಟನೆ ನೀಡಬೇಕು ಹಾಗೂ ಜಿಲ್ಲಾಡಳಿತವು ಮುರಿನಕಟ್ಟೆಯನ್ನು ಶೀಘ್ರವಾಗಿ ಸರಿಯಾದ ರೀತಿಯಲ್ಲಿ ಮರುನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

17 ಕಾರ್ಯಕರ್ತರಿಗೆ ಉಚಿತ ಕಾನೂನು ನೆರವು: ಬಿಜೆಪಿ ಜಿಲ್ಲಾ ಕಾನೂನು ಪ್ರಕೋಷ್ಟದ ಅಧ್ಯಕ್ಷ ಸುರೇಶ್ ಕೋಣೆಮನೆ ಮಾತನಾಡಿ, ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಎಲ್ಲಾ 17 ಕಾರ್ಯಕರ್ತರಿಗೂ ಬಿಜೆಪಿ ವತಿಯಿಂದ ಉಚಿತವಾಗಿ ಜಾಮೀನು ಹಾಗೂ ಸಂಪೂರ್ಣ ಕಾನೂನು ನೆರವು ನೀಡಲಾಗುವುದು. ಕಾರ್ಯಕರ್ತರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ನಾಯ್ಕ, ಸುಬ್ರಾಯ ದೇವಾಡಿಗ, ರವಿ ನಾಯ್ಕ, ಭಾಸ್ಕರ ದೈವಿಮನೆ, ಮೋಹನ್ ನಾಯ್ಕ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ವರದಿ: ಭಾವನಾ ಟಿವಿ ಡೆಸ್ಕ್

About The Author

error: Content is protected !!