October 24, 2026

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದ ಮೂರರ ಕಿಶೋರಿ ಸ್ವರಶ್ರೀ

ಹೊನ್ನಾವರ: ತಬಲಾ ವಾದನದಲ್ಲಿ ಅಸಾಧಾರಣ ಪ್ರತಿಭೆ ತೋರಿರುವ ಹೊನ್ನಾವರ ತಾಲೂಕು ಆಡುಕಳದ ಕೇವಲ ೨ ವರ್ಷ ೧೦ ತಿಂಗಳ ವಯಸ್ಸಿನ ಸ್ವರಶ್ರೀ ಗುರುರಾಜ ಹೆಗಡೆ, ಪ್ರತಿಷ್ಠಿತ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆದು ಕಿರಿಯ ವಯಸ್ಸಿನಲ್ಲೇ ನಾಡಿಗೆ ಕೀರ್ತಿ ತಂದಿದ್ದಾರೆ.

ತಬಲಾದ ಪ್ರಮುಖ ೧೨ ತಾಳಗಳನ್ನು ಬಾಯಲ್ಲಿ ಉಚ್ಚರಿಸುವುದರ ಜೊತೆಗೆ, ಅದೇ ತಾಳಗಳನ್ನು ತಬಲಾದಲ್ಲಿ ಅತ್ಯಂತ ಸೊಗಸಾಗಿ ನುಡಿಸುವ ಮೂಲಕ ಈ ಪುಟ್ಟ ಬಾಲಕಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಹೊನ್ನಾವರದಲ್ಲಿ ಕಳೆದ ಆರೇಳು ವರ್ಷಗಳಿಂದ ‘ಸ್ವರಶ್ರೀ ಸಂಗೀತ ಶಾಲೆ’ ನಡೆಸುತ್ತಿರುವ ಪ್ರಸಿದ್ಧ ತಬಲಾಪಟು ಗುರುರಾಜ ಹೆಗಡೆ ಆಡುಕಳ ಹಾಗೂ ಗಾಯಕಿ ಶ್ರೀಲತಾ ಗುರುರಾಜ ದಂಪತಿಯ ಪುತ್ರಿಯಾಗಿರುವ ಸ್ವರಶ್ರೀಗೆ, ಎಳವೆಯಿಂದಲೇ ಸಂಗೀತದ ಬಗ್ಗೆ ಒಲವಿತ್ತು. ಪಾಲಕರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಿಂದ ಈ ಅಪರೂಪದ ಸಾಧನೆ ಸಾಧ್ಯವಾಗಿದ್ದು, ಪ್ರಸ್ತುತ ‘ಲಯಶ್ರೀ’ಯಾಗಿಯೂ ಇವಳು ಸಂಗೀತ ಲೋಕದ ಗಮನ ಸೆಳೆದಿದ್ದಾಳೆ.

ಕಿಶೋರಿಯ ಈ ಮೇರು ಸಾಧನೆಗೆ ಕೆ. ರಮೇಶ್ ರಾವ್, ಶೋಭಾ ಹೆಗಡೆ, ಸುರೇಶ್ ಹೆಗಡೆ, ಲೀಲಾ ಹೆಗಡೆ ಸೇರಿದಂತೆ ಅನೇಕ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

About The Author

error: Content is protected !!