October 24, 2026

ರಾಷ್ಟ್ರೀಯ ಪೊಲೀಸ್ ಬೈಕ್ ರ‍್ಯಾಲಿಗೆ ಅದ್ಧೂರಿ ಸ್ವಾಗತ; ‘ಮಾದಕವಸ್ತು ಮುಕ್ತ ಭಾರತ’ಕ್ಕೆ ಜಾಗೃತಿ

ಭಟ್ಕಳ: ರಾಷ್ಟ್ರೀಯ ಏಕತೆ ಹಾಗೂ ‘ಮಾದಕವಸ್ತು ಮುಕ್ತ ಭಾರತ’ದ ಸಂದೇಶದೊಂದಿಗೆ ತ್ರಿಪುರಾದಿಂದ ಗುಜರಾತ್‌ಗೆ ಸಾಗುತ್ತಿರುವ ‘ರಾಷ್ಟ್ರೀಯ ಪೊಲೀಸ್ ಮೋಟಾರ್‌ಸೈಕಲ್ ರ‍್ಯಾಲಿ’ಗೆ ಭಟ್ಕಳದಲ್ಲಿ ಪೊಲೀಸ್ ಇಲಾಖೆಯಿಂದ ಆತ್ಮೀಯ ಸ್ವಾಗತ ಕೋರಲಾಯಿತು.

ಭಟ್ಕಳ ಉಪವಿಭಾಗದ ಪೊಲೀಸ್ ಇಲಾಖೆಯ ವತಿಯಿಂದ ಸರ್ಪನಕಟ್ಟೆ ಚೆಕ್‌ಪೋಸ್ಟ್ ಬಳಿ ರ‍್ಯಾಲಿಯನ್ನು ಬರಮಾಡಿಕೊಳ್ಳಲಾಯಿತು. ಡಿವೈಎಸ್ಪಿ ಎಸ್.ವಿ. ಗಿರೀಶ್, ಸಿಪಿಐ ದಿವಾಕರ ಪಿ.ಎಂ. ಹಾಗೂ ಗ್ರಾಮೀಣ ಸಿಪಿಐ ವೆಂಕಟೇಶ್ ಎಸ್. ಮುರ್ನಾಲ್ ಉಪಸ್ಥಿತರಿದ್ದು, ತಂಡಕ್ಕೆ ಶುಭ ಹಾರೈಸಿದರು. ಸರ್ಪನಕಟ್ಟೆಯಿಂದ ಆರಂಭವಾದ ರ‍್ಯಾಲಿಯು ಪಾಲಗೋಡು, ಮೂಡಭಟ್ಕಳ ಬೈಪಾಸ್, ಶಂಸುದ್ದೀನ್ ಸರ್ಕಲ್ ಮೂಲಕ ಸಾಗಿ, ಮುರ್ಡೇಶ್ವರ ಮಾರ್ಗವಾಗಿ ಗೋಕರ್ಣದತ್ತ ಪ್ರಯಾಣ ಬೆಳೆಸಿತು.

ಏಕತಾ ದಿವಸ್‌ಗೆ ಪ್ರಯಾಣ: ಅಕ್ಟೋಬರ್ ೩೧ರಂದು ಗುಜರಾತ್‌ನ ಏಕತಾ ನಗರದಲ್ಲಿ ನಡೆಯಲಿರುವ ‘ರಾಷ್ಟ್ರೀಯ ಏಕತಾ ದಿನಾಚರಣೆ’ ಪರೇಡ್‌ನಲ್ಲಿ ಪಾಲ್ಗೊಳ್ಳಲು ಈ ರ‍್ಯಾಲಿ ಸಾಗುತ್ತಿದೆ. ಅಕ್ಟೋಬರ್ ೮ರಂದು ತ್ರಿಪುರಾದ ಅಗರ್ತಲಾದಲ್ಲಿ ಚಾಲನೆ ಪಡೆದ ಈ ರ‍್ಯಾಲಿಯು ಸುಮಾರು ೨,೮೦೦ ಕಿ.ಮೀ. ದೂರ ಕ್ರಮಿಸಲಿದೆ.

‘ಮಾದಕವಸ್ತು ಮುಕ್ತ ಭಾರತ’ ಹಾಗೂ ‘ಆಪರೇಷನ್ ತೂಫಾನ್’ ಅಭಿಯಾನಗಳ ಅಡಿಯಲ್ಲಿ ಮಾದಕದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ದೇಶದ ಸಮಗ್ರತೆಯ ಸಂದೇಶ ಸಾರುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ವಿವಿಧ ರಾಜ್ಯಗಳ ಪೊಲೀಸ್ ಪಡೆಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ತಂಡಗಳು ಈ ರ‍್ಯಾಲಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿವೆ.

About The Author

error: Content is protected !!