October 26, 2026

ಹೊನ್ನಾವರದಲ್ಲಿ ರಾಣಿ ಚೆನ್ನಾಭೈರಾದೇವಿ ಪ್ರತಿಮೆ ನಿರ್ಮಾಣಕ್ಕೆ ಆಗ್ರಹ:

ಮೆಣಸಿನಕಾಳು ರಾಣಿ’ಯ ಹೆಸರು ಅಜರಾಮರವಾಗಲಿ ಎಂದು ಕರವೇ ಮನವಿ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಐತಿಹಾಸಿಕ ನಾಯಕಿ, ಸುದೀರ್ಘ ೫೪ ವರ್ಷಗಳ ಕಾಲ ಆಡಳಿತ ನಡೆಸಿದ ‘ಮೆಣಸಿನಕಾಳು ರಾಣಿ’ (Pepper Queen) ಚೆನ್ನಾಭೈರಾದೇವಿಯವರ ಸ್ಮರಣಾರ್ಥ ಹೊನ್ನಾವರದ ಗೇರುಸೊಪ್ಪ ಸರ್ಕಲ್ ದಲ್ಲಿ ಭವ್ಯ ಪ್ರತಿಮೆ ನಿರ್ಮಾಣ ಮಾಡಬೇಕು ಮತ್ತು ಅವರ ಹೆಸರನ್ನು ಅಜರಾಮರಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಬೆಂಬಲಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ (ಕರವೆ) ಮುಖಂಡ ಮಂಜುನಾಥ ಗೌಡ ಮನವಿ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಮೃದ್ಧ ಪರಂಪರೆ ಮತ್ತು ಕರಾವಳಿಯ ಇತಿಹಾಸದಲ್ಲಿ ರಾಣಿ ಚೆನ್ನಾಭೈರಾದೇವಿಯಕೊಡುಗೆ ಅಪಾರವಾಗಿದ್ದು, ಅವರಿಗೆ ಸೂಕ್ತ ಗೌರವ ಸಿಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
೧೬ನೇ ಶತಮಾನದಲ್ಲಿ (ಸಾ.ಶ. ೧೫೫೨ ರಿಂದ ೧೬೦೬) ಗೇರುಸೊಪ್ಪೆಯನ್ನು ರಾಜಧಾನಿಯಾಗಿ ಮಾಡಿಕೊಂಡು ಸುದೀರ್ಘ ೫೪ ವರ್ಷಗಳ ಕಾಲ ಸುಭಿಕ್ಷ ಆಡಳಿತ ನಡೆಸಿದ ಜೈನ ಸಾಳ್ವ ವಂಶದ ಪ್ರಸಿದ್ಧ ರಾಣಿ ಚೆನ್ನಾಬೈರಾದೇವಿ.

ತಮ್ಮ ಸಾಮ್ರಾಜ್ಯ ವ್ಯಾಪ್ತಿಯಲ್ಲಿ ಬೆಳೆಯುತ್ತಿದ್ದ ಶ್ರೇಷ್ಠ ಮಟ್ಟದ ಕಪ್ಪು ಮೆಣಸನ್ನು ಯುರೋಪ್ ಹಾಗೂ ಅರಬ್ ದೇಶಗಳಿಗೆ ರಫ್ತು ಮಾಡುತ್ತಿದ್ದರು. ಪೋರ್ಚುಗೀಸರು ಈಕೆಯ ವ್ಯಾಪಾರ ಚತುರತೆ ಮತ್ತು ಮೆಣಸಿನ ವ್ಯಾಪಾರದ ಮೇಲಿನ ಹಿಡಿತವನ್ನು ಕಂಡು ಆಕೆಯನ್ನು ಗೌರವ/ಭಯದಿಂದ ‘ರೈನಾ ಡಾ ಪಿಮೆಂಟಾ’ (Raina da Pimenta – Pepper Queen) ಎಂದು ಕರೆಯುತ್ತಿದ್ದರು.

ಜೈನ ಧರ್ಮೀಯರಾಗಿದ್ದರೂ ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತಿದ್ದರು. ಭಟ್ಕಳ, ಮುರ್ಡೇಶ್ವರ, ಮಿರ್ಜಾನ್ ಕೋಟೆ ಸೇರಿದಂತೆ ಕರಾವಳಿಯ ಅನೇಕ ದೇವಸ್ಥಾನ, ಬಸದಿ ಹಾಗೂ ಪ್ರಸಿದ್ಧ ಮಿರ್ಜಾನ್ ಕೋಟೆ (Mirjan Fort) ನಿರ್ಮಾಣದಲ್ಲಿ ಈಕೆಯ ಪಾತ್ರ ಪ್ರಮುಖವಾದದ್ದು.

ಕರಾವಳಿಯನ್ನು ಆಕ್ರಮಿಸಲು ಬಂದ ಪೋರ್ಚುಗೀಸ್ ಸೈನ್ಯವನ್ನು ಹಾಗೂ ನೆರೆಹೊರೆಯ ಸಾಮಂತರ ನೌಕಾಪಡೆಗಳನ್ನು ರಾಜತಾಂತ್ರಿಕ ತಂತ್ರ ಹಾಗೂ ಧೈರ್ಯದಿಂದ ಮೆಟ್ಟಿ ನಿಂತು ಪ್ರಜಾರಕ್ಷಣೆ ಮಾಡಿದ ವೀರ ವನಿತೆ.
ಕರಾವಳಿಯ ಆರ್ಥಿಕತೆ ಹಾಗೂ ಧಾರ್ಮಿಕ ಸಾಮರಸ್ಯಕ್ಕೆ ಭದ್ರ ಬಡಿಪಾಯ ಹಾಕಿದ ಇಂತಹ ವಿಶಿಷ್ಟ ರಾಣಿಯ ಪ್ರತಿಮೆಯನ್ನು ಹೊನ್ನಾವರದಲ್ಲಿ ಸ್ಥಾಪಿಸುವುದು ಸಾಂಸ್ಕೃತಿಕವಾಗಿ ಅತ್ಯಂತ ಅಗತ್ಯವಾಗಿದೆ ಎಂದು ಕರವೇ ಮುಖಂಡರು ಸಾರ್ವಜನಿಕರು ಸರ್ಕಾರದ ಗಮನ ಸೆಳೆದಿದ್ದಾರೆ.

About The Author

error: Content is protected !!