ಮಡಿಕೇರಿ: ವಿಜಯದಶಮಿಯ ಸಂಭ್ರಮದ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ನಾಪೋಕ್ಲು ಮಂಡಲ ಹಾಗೂ ಗ್ರಾಮಾಂತರ ಶಾಖೆಯ ವತಿಯಿಂದ ನಾಪೋಕ್ಲು ಪಟ್ಟಣದಲ್ಲಿ ಅದ್ಧೂರಿ ಪಥಸಂಚಲನ ಜರುಗಿತು.
ಹಳೆ ತಾಲೂಕು ಆವರಣದಿಂದ ಆರಂಭಗೊಂಡ ಪಥಸಂಚಲನವು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಾಗಿ ಮಾರುಕಟ್ಟೆ ಆವರಣದಲ್ಲಿ ಸಂಪನ್ನಗೊಂಡಿತು.
ಜನಮನ ಸೆಳೆದ ಗಣವೇಷಧಾರಿಗಳು: ಮಂಡಲ ವ್ಯಾಪ್ತಿಯ ವಿವಿಧ ಶಾಖೆಗಳಿಂದ ಆಗಮಿಸಿದ್ದ ನೂರಾರು ಸ್ವಯಂಸೇವಕರು ಪೂರ್ಣ ಗಣವೇಷ ಧರಿಸಿ, ಘೋಷ್ (ವಾದ್ಯ) ಮೇಳದ ತಾಳಕ್ಕೆ ತಕ್ಕಂತೆ ಶಿಸ್ತಿನಿಂದ ಹೆಜ್ಜೆ ಹಾಕಿದರು. ಸಂಘಟನೆಯ ಬದ್ಧತೆ ಹಾಗೂ ರಾಷ್ಟ್ರೀಯತೆಯ ಸಂದೇಶ ಸಾರುತ್ತಾ ಸಾಗಿದ ಮೆರವಣಿಗೆಗೆ ಸ್ಥಳೀಯ ನಾಗರಿಕರು ಹರ್ಷೋದ್ಗಾರ ಹಾಗೂ ಪುಷ್ಪವೃಷ್ಟಿಯ ಮೂಲಕ ಸಾಕ್ಷಿಯಾದರು.
ಈ ಕುರಿತು ಮಾತನಾಡಿದ ಹಿರಿಯ ಸ್ವಯಂಸೇವಕ ಪಳಂಗಂಡ ಅಪ್ಪಣ್ಣ, “ಪ್ರತಿವರ್ಷ ವಿಜಯದಶಮಿಯ ಅಂಗವಾಗಿ ಸಂಘದ ವತಿಯಿಂದ ಪಥಸಂಚಲನ ನಡೆಯುತ್ತದೆ. ಈ ಬಾರಿ ಇಲಾಖೆಯ ಅನುಮತಿ ದೊರೆಯುವುದು ಕೊಂಚ ವಿಳಂಬವಾದ ಕಾರಣ ವಿಜಯದಶಮಿಯ ನಂತರ ಪಥಸಂಚಲನವನ್ನು ಆಯೋಜಿಸಲಾಗಿದೆ” ಎಂದು ವಿವರಣೆ ನೀಡಿದರು. (ವರದಿ: ಪ್ರಿತುನ್ ಪೂವಣ್ಣ)

About The Author


More Stories
ಬೆಳಕುಮಾನಿ ಶಾಲೆಯಲ್ಲಿ ‘ಯೋಗಸಿಂಚನಾ’ ವಿನೂತನ ಯೋಜನೆಗೆ ಚಾಲನೆ
ಮಡಿಕೇರಿ ದಸರಾ: ಕೆಎಸ್ಆರ್ಟಿಸಿಯಿಂದ ಇದೇ ಮೊದಲ ಬಾರಿಗೆ ವಿಶೇಷ ಪ್ಯಾಕೇಜ್ ಟೂರ್
‘ಸಮಸ್ತ’ ಆ್ಯಪ್ ತಾಂತ್ರಿಕ ದೋಷ ಖಂಡಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ