ಮಡಿಕೇರಿ: ಯೋಗ ಪ್ರದರ್ಶನದಲ್ಲಿ ಸತತ ೧೮ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸಿರುವ ಮದೆನಾಡಿನ ಯುವ ಯೋಗಸಾಧಕಿ ಸಿಂಚನಾ ಅವರು ಶಾಲಾ ವಿದ್ಯಾರ್ಥಿಗಳಲ್ಲಿ ಯೋಗದ ಜಾಗೃತಿ ಮೂಡಿಸುವ ಉದ್ದೇಶದಿಂದ ‘ಯೋಗಸಿಂಚನಾ’ ಎಂಬ ವಿನೂತನ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ತಾವು ಪ್ರಾಥಮಿಕ ಶಿಕ್ಷಣ ಪೂರೈಸಿದ ಮದೆನಾಡು ವ್ಯಾಪ್ತಿಯ ಬೆಳಕುಮಾನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ವಿಶೇಷ ಯೋಜನೆಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಶಾಲೆಯ ಮುಖ್ಯಶಿಕ್ಷಕಿ ಭಾಗ್ಯಲಕ್ಷ್ಮಿ ಶಿವರಾಮ್, ದೇವಕೊಲ್ಲಿಯ ಶ್ರೀ ಚಾಮುಂಡೇಶ್ವರಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಯಶೋದರ ಹಾಗೂ ನಿವೃತ್ತ ಶಿಕ್ಷಕ ಶಿವರಾಮ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಯೋಗ ಶಿಕ್ಷಣ ಮತ್ತು ಪ್ರಾತ್ಯಕ್ಷಿಕೆ: ಇದೇ ಸಂದರ್ಭದಲ್ಲಿ ಯೋಗಸಾಧಕಿ ಸಿಂಚನಾ ವಿದ್ಯಾರ್ಥಿಗಳಿಗೆ ಯೋಗಮಂತ್ರದ ಅರ್ಥ, ಅಷ್ಟಾಂಗ ಯೋಗದ ಮಹತ್ವ, ಅಭ್ಯಾಸದ ನಿಯಮಗಳು ಹಾಗೂ ವಿದ್ಯಾರ್ಥಿ ಜೀವನದಲ್ಲಿ ಯೋಗದಿಂದ ಸಿಗುವ ಏಕಾಗ್ರತೆ ಮತ್ತು ಆರೋಗ್ಯ ಪ್ರಯೋಜನಗಳ ಕುರಿತು ಮನವರಿಕೆ ಮಾಡಿಕೊಟ್ಟರು. ಸರಳ ವ್ಯಾಯಾಮಗಳು, ಸೂರ್ಯ ನಮಸ್ಕಾರ, ಸೂರ್ಯ ಮಂತ್ರಗಳು ಹಾಗೂ ೧೨ ಪ್ರಮುಖ ಆಸನಗಳ ಉಸಿರಾಟದ ಕ್ರಮಗಳನ್ನು ಪ್ರಾಯೋಗಿಕವಾಗಿ ಅಭ್ಯಾಸ ಮಾಡಿಸಿದರು.

ಬಳಿಕ ಸಿಂಚನಾ ಅವರು ನೀಡಿದ ಮನಮೋಹಕ ಕಲಾತ್ಮಕ ಯೋಗನೃತ್ಯ ಪ್ರದರ್ಶನವು ನೆರೆದಿದ್ದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ಸಿಂಚನಾ ಅವರ ಪೋಷಕರಾದ ಕೀರ್ತಿಕುಮಾರ್ ಮತ್ತು ರೇಣುಕಾ, ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿ, ಎಸ್‌ಡಿಎಂಸಿ ಆಡಳಿತ ಮಂಡಳಿ ಸದಸ್ಯರು, ಶಾಲಾ ಮಕ್ಕಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
(ವರದಿ: ಪ್ರಿತುನ್ ಪೂವಣ್ಣ)
About The Author


More Stories
ಮಡಿಕೇರಿ ದಸರಾ: ಕೆಎಸ್ಆರ್ಟಿಸಿಯಿಂದ ಇದೇ ಮೊದಲ ಬಾರಿಗೆ ವಿಶೇಷ ಪ್ಯಾಕೇಜ್ ಟೂರ್
‘ಸಮಸ್ತ’ ಆ್ಯಪ್ ತಾಂತ್ರಿಕ ದೋಷ ಖಂಡಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ: ಕಾನೂನು ಸುವ್ಯವಸ್ಥೆ ಪಾಲನೆಗೆ ಜಿಲ್ಲಾಧಿಕಾರಿ ಖಡಕ್ ಸೂಚನೆ