October 28, 2026

ಶ್ರೀಚೆನ್ನಕೇಶವ ಪ್ರೌಢಶಾಲೆಯಲ್ಲಿ ವಿಶ್ವಸಂಸ್ಥೆ ದಿನಾಚರಣೆ; ಉಪನ್ಯಾಸ ಕಾರ್ಯಕ್ರಮ

ಹೊನ್ನಾವರ: ತಾಲೂಕಿನ ಕರ್ಕಿಯ ಶ್ರೀಚೆನ್ನಕೇಶವ ಪ್ರೌಢಶಾಲೆಯಲ್ಲಿ ಲಯನ್ಸ್ ಕ್ಲಬ್ ಹೊನ್ನಾವರ ಹಾಗೂ ಶಾಲೆಯ ಸಹಯೋಗದಲ್ಲಿ ವಿಶ್ವಸಂಸ್ಥೆ ದಿನಾಚರಣೆಯ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿದ್ದ ಹೊನ್ನಾವರ ಎಸ್‌ಡಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಡಿ.ಎಲ್. ಹೆಬ್ಬಾರ ಮಾತನಾಡಿ, “ಎರಡನೇ ಮಹಾಯುದ್ಧದ ನಂತರ ಜಾಗತಿಕ ಶಾಂತಿ ಹಾಗೂ ಸಹಬಾಳ್ವೆಯ ಉದ್ದೇಶದಿಂದ ಸ್ಥಾಪನೆಯಾದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವ ಹೆಗ್ಗಳಿಕೆ ಜಾಗತಿಕ ಲಯನ್ಸ್ ಸಂಸ್ಥೆಗಿದೆ. ವಿಶ್ವಸಂಸ್ಥೆಯ ಮಹೋನ್ನತ ಗುರಿಗಳನ್ನು ಯುವ ಪೀಳಿಗೆಗೆ ತಲುಪಿಸುವುದು ಇಂದಿನ ಅಗತ್ಯವಾಗಿದೆ” ಎಂದರು.

“ನಾವು ಏನಾಗಿದ್ದೇವೆ ಎಂಬುದು ದೇವರ ವರದಾನ, ನಾವು ಏನಾಗುತ್ತೇವೆ ಎಂಬುದು ಸಮಾಜಕ್ಕೆ ನಾವು ನೀಡುವ ಕೊಡುಗೆ. ವಿದ್ಯಾರ್ಥಿಗಳು ರಾಷ್ಟ್ರೀಯ ಭಾವನೆಯನ್ನು ಬೆಳೆಸಿಕೊಂಡು ‘ವಿಕಸಿತ ಭಾರತ’ ನಿರ್ಮಾಣಕ್ಕೆ ಕೈಜೋಡಿಸಬೇಕು” ಎಂದು ಕರೆ ನೀಡಿದ ಅವರು, ೧೦ನೇ ತರಗತಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸಲು ಶ್ರಮಿಸಬೇಕೆಂದು ಶುಭ ಹಾರೈಸಿದರು.

ಜಾಗತಿಕ ಸಹಕಾರಕ್ಕೆ ಯುವಜನತೆಯ ಪಾತ್ರ ಮುಖ್ಯ: ಲಯನ್ಸ್ ಕ್ಲಬ್ ಹೊನ್ನಾವರ ಕಾರ್ಯದರ್ಶಿ ಹಾಗೂ ಕೆಪಿಟಿಸಿಎಲ್ ನಿವೃತ್ತ ಅಧಿಕಾರಿ ನರಸಿಂಹಮೂರ್ತಿ ಪಂಡಿತ್ ಮಾತನಾಡಿ, “ವಿಶ್ವಸಂಸ್ಥೆಯ ಮೂಲ ಉದ್ದೇಶ ಜಾಗತಿಕ ಸಹಕಾರ ಹಾಗೂ ಸದಸ್ಯ ರಾಷ್ಟ್ರಗಳ ಅಭಿವೃದ್ಧಿಯಾಗಿದೆ. ವಿದ್ಯಾರ್ಥಿಗಳು ತಾಳ್ಮೆ, ಸಹನೆ, ಸಹಬಾಳ್ವೆ ಮತ್ತು ಉತ್ತಮ ಶಿಕ್ಷಣದೊಂದಿಗೆ ಜವಾಬ್ದಾರಿಯುತ ನಾಗರಿಕರಾದಾಗ ಮಾತ್ರ ರಾಷ್ಟ್ರದ ಪ್ರಗತಿ ಸಾಧ್ಯ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಜಿ.ಪಂ. ಎಂಜಿನಿಯರಿಂಗ್ ವಿಭಾಗದ ನಿವೃತ್ತ ಅಧಿಕಾರಿ ಎಂ.ವಿ. ಹೆಗಡೆ ಉಪಸ್ಥಿತರಿದ್ದರು. ಶಾಲೆಯ ಮುಖ್ಯಾಧ್ಯಾಪಕ ಎಲ್.ಎಂ. ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳಿಗೆ ಗೌರವ ಸಮರ್ಪಿಸಿದರು. ವಿಜ್ಞಾನ ಶಿಕ್ಷಕ ಶ್ರೀಕಾಂತ್ ಹಿಟ್ನಳ್ಳಿ ವಂದಿಸಿದರು, ಶಿಕ್ಷಕಿ ಮುಕ್ತಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

About The Author

error: Content is protected !!