ನ. ೩ರಂದು ಯಲ್ಲಾಪುರದಲ್ಲಿ ನಡೆಯುವ ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟದಲ್ಲಿ ಒಗ್ಗಟ್ಟಿನಿಂದ ಪಾಲ್ಗೊಳ್ಳಲು ಕರೆ
ಶಿರಸಿ: ಬೇಡ್ತಿ(ಗಂಗಾವಳಿ)–ವರದಾ ಹಾಗೂ ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆಗಳನ್ನು ಸಂಪೂರ್ಣವಾಗಿ ಕೈಬಿಡಬೇಕೆಂದು ಆಗ್ರಹಿಸಿ ನವೆಂಬರ್ ೩ರಂದು ಯಲ್ಲಾಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟವು ಅತ್ಯಂತ ಶಾಂತಿಯುತ, ಶಿಸ್ತು ಮತ್ತು ಸಂಯಮದಿಂದ ನಡೆಯಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶರಾದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಕರೆ ನೀಡಿದ್ದಾರೆ.

‘ಪಶ್ಚಿಮಘಟ್ಟ ಉಳಿಸಿ, ಉತ್ತರ ಕನ್ನಡ ರಕ್ಷಿಸಿ’ ಎಂಬ ಆಶಯದೊಂದಿಗೆ ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ (ಶಿರಸಿ) ಹಾಗೂ ರಸ್ತೆ ತಡೆ ಸಂಚಾಲನಾ ಸಮಿತಿ (ಯಲ್ಲಾಪುರ) ಸಹಯೋಗದಲ್ಲಿ ಈ ಬೃಹತ್ ಪ್ರತಿಭಟನೆ ಆಯೋಜಿತಗೊಂಡಿದೆ.

ಪ್ರಕೃತಿ ನಿಯಮಕ್ಕೆ ವಿರುದ್ಧವಾದ ಯೋಜನೆ: “ಪೂರ್ವಕ್ಕೆ ಹರಿಯುವ ನದಿಗಳನ್ನು ಪಶ್ಚಿಮಕ್ಕೂ, ಪಶ್ಚಿಮಕ್ಕೆ ಹರಿಯುವ ನದಿಗಳನ್ನು ಪೂರ್ವಕ್ಕೂ ತಿರುಗಿಸುವುದು ಪ್ರಕೃತಿ ನಿಯಮಕ್ಕೆ ವಿರುದ್ಧ. ಇಂತಹ ವಿನಾಶಕಾರಿ ಯೋಜನೆಗಳು ಪಶ್ಚಿಮಘಟ್ಟದ ಪರಿಸರ, ಕೃಷಿ ಮತ್ತು ಕರಾವಳಿ-ಮಲೆನಾಡಿನ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿವೆ. ಜೀವನಾಡಿಯಾದ ನದಿಗಳನ್ನು ರಕ್ಷಿಸುವುದು ಮುಂದಿನ ಪೀಳಿಗೆಯ ಬದುಕನ್ನು ಕಾಯ್ದುಕೊಂಡಂತೆ. ಹಾಗಾಗಿ, ಈ ಯೋಜನೆಯನ್ನು ಸರ್ಕಾರ ಶಾಶ್ವತವಾಗಿ ಕೈಬಿಡಬೇಕು” ಎಂದು ಶ್ರೀಗಳು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಪಾದಿಸಿದ್ದಾರೆ.

ಹೋರಾಟದ ರೂಪುರೇಷೆ: ದಿನಾಂಕ & ಸಮಯ: ನವೆಂಬರ್ ೩ರಂದು ಬೆಳಿಗ್ಗೆ ೯:೩೦ರೊಳಗೆ ಯಲ್ಲಾಪುರದ ಟಿಎಂಎಸ್ ಸೂಪರ್ ಮಾರ್ಕೆಟ್ ಸಮೀಪದ ಮೈದಾನದಲ್ಲಿ ಪ್ರತಿಭಟನಾಕಾರರು ಸಮಾವೇಶಗೊಳ್ಳಲಿದ್ದಾರೆ.
ವಾಹನ ನಿಲುಗಡೆ: ಪ್ರತಿಭಟನಾಕಾರರ ವಾಹನಗಳ ನಿಲುಗಡೆಗೆ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಹಾಗೂ ವೈಟಿಎಸ್ಎಸ್ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಸಭೆ & ಧರಣಿ: ಬೆಳಿಗ್ಗೆ ೧೦ ಗಂಟೆಗೆ ಪ್ರತಿಭಟನಾ ಸಭೆ ನಡೆಯಲಿದ್ದು, ಬಳಿಕ ಬೃಹತ್ ಮೆರವಣಿಗೆಯ ಮೂಲಕ ಸಭಾಗೇರಿಯ ಶಿವಾಜಿ ವೃತ್ತಕ್ಕೆ ತೆರಳಿ ರಾಷ್ಟ್ರೀಯ ಹೆದ್ದಾರಿ ತಡೆದು ಧರಣಿ ನಡೆಸಲಾಗುವುದು.
ಸರ್ಕಾರದ ಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ, ಯೋಜನೆಗಳನ್ನು ಸಂಪೂರ್ಣವಾಗಿ ಕೈಬಿಡುವ ಕುರಿತು ಸ್ಪಷ್ಟ ಭರವಸೆ ನೀಡುವವರೆಗೆ ಧರಣಿ ಮುಂದುವರಿಯಲಿದೆ. ಶ್ರೀಮಠದ ಶಿಷ್ಯರು, ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಜವಾಬ್ದಾರಿಯಿಂದ ಪಾಲ್ಗೊಂಡು ಹೋರಾಟ ಯಶಸ್ವಿಗೊಳಿಸಬೇಕೆಂದು ಶ್ರೀಗಳು ವಿನಂತಿಸಿದ್ದಾರೆ.
About The Author


More Stories
‘ನಮ್ಮನೆ ಪ್ರಶಸ್ತಿ’ ಘೋಷಣೆ; ದತ್ತಗುರು ಹೆಗಡೆ, ಆಶಾ ವಿ. ಸೇರಿ ನಾಲ್ವರು ಸಾಧಕರಿಗೆ ಗೌರವ
‘ಕಂಸವಧೆ’ ತಾಳಮದ್ದಳೆಗೆ ಪ್ರೇಕ್ಷಕರು ಸಮ್ಮೋಹಿತ; ಕಲಾವಿದ ಡಾ. ಗಣಪತಿ ಭಟ್ಟ ಸಂಕದಗುಂಡಿ ಅವರಿಗೆ ಸನ್ಮಾನ
ಮಂಗಳೂರಿನ ಟೆಕ್ನೋವಾನ್ಜಾ ಸಮಾವೇಶದಲ್ಲಿ ಶಿರಸಿಯ ಪ್ರೊಭಾರತ್ ಸಂಸ್ಥೆಗೆ ಗೌರವ