ಮೂವರು ವೈದ್ಯರ ರಾಜೀನಾಮೆ; ಶಿರಾಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸ್ಥಗಿತ, ರೋಗಿಗಳು ಪರದಾಟ
ಭಟ್ಕಳ: ಶಿರಾಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ನಡೆದ ಹಲ್ಲೆ ಘಟನೆಯನ್ನು ಖಂಡಿಸಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ (KGMOA) ಹಾಗೂ ಭಾರತೀಯ ವೈದ್ಯಕೀಯ ಸಂಘದ (IMA) ಪದಾಧಿಕಾರಿಗಳು ಬೃಹತ್ ಪ್ರತಿಭಟನೆ ನಡೆಸಿದರು. ಹಲ್ಲೆ ನಡೆಸಿದ ಆರೋಪಿಗಳನ್ನು ೨೪ ಗಂಟೆಯೊಳಗೆ ಬಂಧಿಸದಿದ್ದರೆ ಜಿಲ್ಲೆ ಹಾಗೂ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.


ಭಟ್ಕಳ ಸರ್ಕಾರಿ ಆಸ್ಪತ್ರೆಯಿಂದ ಮೆರವಣಿಗೆಯ ಮೂಲಕ ತೆರಳಿದ ವೈದ್ಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ, ಸಹಾಯಕ ಆಯುಕ್ತ ಮಹೇಶ ಕೆ. ಹಾಗೂ ಸಹಾಯಕ ಪೊಲೀಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.


ಸಿಪಿಆರ್ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದ ಮಗು: ಅಕ್ಟೋಬರ್ ೨೮ರಂದು ಶಿರಾಲಿ ಆಸ್ಪತ್ರೆಯಲ್ಲಿ ನವಜಾತ ಶಿಶು ಮೃತಪಟ್ಟ ಹಿನ್ನೆಲೆಯಲ್ಲಿ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ೧೦ರಿಂದ ೧೧ ಜನರ ಗುಂಪೊಂದು ಆಡಳಿತ ವೈದ್ಯಾಧಿಕಾರಿ ಕೊಠಡಿಗೆ ನುಗ್ಗಿ ಹಲ್ಲೆ ನಡೆಸಿದೆ. ಹಾಲುಣಿಸುವಾಗ ಮಗುವಿನ ಮೈಬಣ್ಣ ನೀಲಿಗಟ್ಟಿದ್ದನ್ನು ಗಮನಿಸಿದ ಸಿಬ್ಬಂದಿ ಕೂಡಲೇ ಮಕ್ಕಳ ತಜ್ಞರಿಗೆ ಮಾಹಿತಿ ನೀಡಿದ್ದರು. ವೈದ್ಯರು ಸಿಪಿಆರ್ ಚಿಕಿತ್ಸೆ ನೀಡಿದರೂ ಮಗು ಜೀವ ಕಳೆದುಕೊಂಡಿತ್ತು.
ಬಳಿಕ ಆಸ್ಪತ್ರೆಗೆ ನುಗ್ಗಿದ ಗುಂಪು ಮಕ್ಕಳ ತಜ್ಞ ಡಾ. ಲೀಲಾಧರ ಮೊಗೇರ, ಡಾ. ಆದರ್ಶ ವಿ.ಪಿ. ಅವರ ಮೇಲೆ ಹಲ್ಲೆ ನಡೆಸಿ, ಮಹಿಳಾ ವೈದ್ಯರಿಗೆ ಬೆದರಿಕೆ ಹಾಕಿದೆ ಎಂದು ಸಂಘಟನೆ ಆರೋಪಿಸಿದೆ.
ಮೂವರು ವೈದ್ಯರ ರಾಜೀನಾಮೆ – ಆಸ್ಪತ್ರೆ ಸೇವೆ ಏರುಪೇರು: ಘಟನೆಯಿಂದ ಮನನೊಂದ ಎನ್ಎಚ್ಎಂ ಗುತ್ತಿಗೆ ಆಧಾರಿತ ಮಕ್ಕಳ ತಜ್ಞ ಡಾ. ಲೀಲಾಧರ ಮೊಗೇರ, ವೈದ್ಯಾಧಿಕಾರಿ ರಾಜೇಶ ನಾಯ್ಕ ಹಾಗೂ ಹೆರಿಗೆ ತಜ್ಞೆ ಡಾ. ವಿಭಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಕೆಜಿಎಂಒಎ ಜಿಲ್ಲಾಧ್ಯಕ್ಷೆ ಡಾ. ಸವಿತಾ ಕಾಮತ್ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದ್ದು, ಸದ್ಯ ದಂತ ವೈದ್ಯರು ಹಾಗೂ ಅರವಳಿಕೆ ತಜ್ಞರು ಮಾತ್ರ ಬಾಕಿ ಉಳಿದಿದ್ದಾರೆ. ಇದರಿಂದ ಶಿರಾಲಿಯ ಸುತ್ತಮುತ್ತಲಿನ ಬಡ ರೋಗಿಗಳಿಗೆ ಚಿಕಿತ್ಸೆ ಸಿಗದೆ ತೀವ್ರ ಸಂಕಷ್ಟ ಎದುರಾಗಿದೆ.
ಪ್ರತಿಭಟನೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಸನಾ ಪಟೇಲ್, ಕೆಜಿಎಂಒಎ ಕಾರ್ಯದರ್ಶಿ ಶೃತಿ ನಾಯ್ಕ, ಐಎಂಎ ಪ್ರಧಾನ ಕಾರ್ಯದರ್ಶಿ ಜನಾರ್ದನ ಮೊಗೇರ, ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ, ಡಾ. ಸುರಕ್ಷಿತ ಶೆಟ್ಟಿ, ಡಾ. ಉಮೇಶ, ಡಾ. ಸವಿತಾ ಕಾಮತ್, ಡಾ. ಅಬ್ದುಲ್ ಖಾದಿರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

More Stories
ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಮಿಂಚು
ಜಾಲಿಯಲ್ಲಿ ಬೆಳಕೆ ವಲಯ ಮಟ್ಟದ ಪ್ರತಿಭಾ ಕಾರಂಜಿ ಸಂಭ್ರಮ
ನ್ಯಾಯಾಲಯದ ವಾರಂಟ್ ಜಾರಿಗೊಳಿಸಲು ತೆರಳಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಆರೋಪಿ ಪರಾರಿ!