November 23, 2026

ತಬಲಾ ವಾದನದಲ್ಲಿ ಅಪ್ರತಿಮ ಸಾಧನೆ: ಪುಟಾಣಿ ಸ್ವರಶ್ರೀಗೆ ಉದ್ಯಮಿ ಮಾಸ್ತಪ್ಪ ನಾಯ್ಕರಿಂದ ಸನ್ಮಾನ

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಕಿರಿಯ ತಬಲಾ ಕಲಾವಿದೆಯಾಗಿ ದಾಖಲೆ ಬರೆದ ‘ಆಡುಕಳ’ದ ಕಂದಮ್ಮ

ಹೊನ್ನಾವರ: ಚಿಕ್ಕ ವಯಸ್ಸಿನಲ್ಲೇ ಅಸಾಧಾರಣ ಪ್ರತಿಭೆ ಮೆರೆದು ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಅತ್ಯಂತ ಕಿರಿಯ ತಬಲಾ ಕಲಾವಿದೆಯಾಗಿ ಸ್ಥಾನ ಪಡೆದಿರುವ ಆಡುಕಳದ ೨ ವರ್ಷ ೧೦ ತಿಂಗಳ ಪುಟಾಣಿ ಸ್ವರಶ್ರೀಯನ್ನು ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಮಾಸ್ತಪ್ಪ ನಾಯ್ಕ ಬಲಸೆ ಅವರು ಸನ್ಮಾನಿಸಿ ಗೌರವಿಸಿದರು.

ಸ್ವರಶ್ರೀಯ ಮನೆಗೆ ತೆರಳಿ ಬಾಲಕಿಯ ಸಾಂಸ್ಕೃತಿಕ ಸಾಧನೆಯನ್ನು ಶ್ಲಾಘಿಸಿದ ಮಾಸ್ತಪ್ಪ ನಾಯ್ಕ, “ಇಷ್ಟು ಚಿಕ್ಕ ವಯಸ್ಸಿನಲ್ಲಿ ತಬಲಾದಂತಹ ಶಾಸ್ತ್ರೀಯ ವಾದ್ಯದಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿರುವುದು ನಮ್ಮ ತಾಲೂಕಿಗೆ ಹೆಮ್ಮೆಯ ಸಂಗತಿ. ಈ ಪುಟಾಣಿಯ ಸಾಧನೆಯ ಹಿಂದೆ ತಂದೆ-ತಾಯಿಯ ಅಪಾರ ಪರಿಶ್ರಮ, ಪ್ರೋತ್ಸಾಹ ಹಾಗೂ ನಿರಂತರ ಬೆಂಬಲವಿದೆ” ಎಂದರು.

ಮಗುವಿನ ಆಸಕ್ತಿ ಮತ್ತು ಪ್ರತಿಭೆಯನ್ನು ಸರಿಯಾದ ಸಮಯದಲ್ಲಿ ಗುರುತಿಸಿ ಪ್ರೋತ್ಸಾಹಿಸಿದರೆ ಇಂತಹ ಅಭೂತಪೂರ್ವ ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ಸ್ವರಶ್ರೀ ಸೂಕ್ತ ಉದಾಹರಣೆಯಾಗಿದ್ದು, ಬಾಲಕಿಯ ಸಂಗೀತ ಪಯಣ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸ್ವರಶ್ರೀಯ ತಂದೆ ಗುರುರಾಜ, ತಾಯಿ ಶ್ರೀಲತಾ, ಪ್ರಮುಖರಾದ ರಾಜೇಶ ಮಹಿಮೆ, ಮಂಜು ಬಳ್ಕೂರ್, ವಿಶ್ವ ನಾಯ್ಕ ಹಾಗೂ ನವೀನ್ ನಾಯ್ಕ ಉಪಸ್ಥಿತರಿದ್ದರು.

About The Author

error: Content is protected !!