November 22, 2026

ಜಿ.ಯು. ಭಟ್ ಸಮಾಜದ ಜೀವ ನದಿಯಂತೆ ಮಾದರಿ ವ್ಯಕ್ತಿ: ಫಾದರ್ ಸಾಲ್ವದೊರ್ ಗೋನ್ಸಾಲ್ವಿಸ್ ಬಣ್ಣನೆ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಿ.ಯು. ಭಟ್ ಅವರಿಗೆ ಹೊನ್ನಾವರ ನಂಬರ್-೨ ಶಾಲೆಯಲ್ಲಿ ಆತ್ಮೀಯ ಸನ್ಮಾನ

ಹೊನ್ನಾವರ: “ಪತ್ರಕರ್ತರು ಸಮಾಜದ ಅತಿ ದೊಡ್ಡ ಆಸ್ತಿ. ಹೊನ್ನಾವರದ ಹಿರಿಯ ಪತ್ರಕರ್ತ ಜಿ.ಯು. ಭಟ್ ಅವರು ಜೀವ ನದಿಯಂತೆ ಎಲ್ಲರ ಬದುಕಿಗೆ ಮಾದರಿಯಾಗಿ ಬೆಳೆದವರು” ಎಂದು ಸಾನ್ ಸಾಲ್ವಾದೊರ್ ಚರ್ಚ್‌ನ ಫಾದರ್ ಸಾಲ್ವದೊರ್ ಗೋನ್ಸಾಲ್ವಿಸ್ ಅಭಿಪ್ರಾಯಪಟ್ಟರು.

ಪಟ್ಟಣದ ಹೊನ್ನಾವರ ನಂಬರ್-೨ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಪ್ರಸಕ್ತ ಸಾಲಿನ ‘ರಾಜ್ಯೋತ್ಸವ ಪ್ರಶಸ್ತಿ’ ಪುರಸ್ಕೃತ ಹಿರಿಯ ಪತ್ರಕರ್ತ ಜಿ.ಯು. ಭಟ್ ಅವರನ್ನು ಶಾಲೆಯ ಪರವಾಗಿ ಆತ್ಮೀಯವಾಗಿ ಸನ್ಮಾನಿಸಿ ಅವರು ಮಾತನಾಡಿದರು.

“ತಮ್ಮ ೫೦ ವರ್ಷಗಳ ಸುದೀರ್ಘ ಪತ್ರಿಕಾ ವೃತ್ತಿಯಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಪ್ರಾಮಾಣಿಕತೆಯಿಂದ ಸಮಾಜವನ್ನು ಒಗ್ಗೂಡಿಸುವ ಹಾಗೂ ಸಮಾಜದ ಕುಂದು-ಕೊರತೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಜಿ.ಯು. ಭಟ್ ಮಾಡಿದ್ದಾರೆ. ಸರ್ವಧರ್ಮ ಸಾಮರಸ್ಯದ ಸಂಕೇತವಾಗಿ ಬದುಕಿರುವ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಇಡೀ ಹೊನ್ನಾವರ ತಾಲೂಕಿಗೆ ಹೆಮ್ಮೆಯ ವಿಷಯ” ಎಂದರು.

ಪ್ರಾಮಾಣಿಕ ಪತ್ರಕರ್ತರಿಂದ ಸಮಾಜ ಸುಧಾರಣೆ: ಮುಖ್ಯ ಅತಿಥಿ ಫಾದರ್ ಡಯಾಸ್ ಮಾತನಾಡಿ, “ಪ್ರಾಮಾಣಿಕ ಪತ್ರಕರ್ತರು ಸಮಾಜದ ಕಣ್ಣು ಮತ್ತು ಮೂಗಿನಂತೆ. ಅಂತಹ ಸಾಮಾಜಿಕ ಜಾಗೃತಿಯ ಯೋಗ್ಯತೆ ಜಿ.ಯು. ಭಟ್ಟರಿಗಿರುವುದರಿಂದಲೇ ರಾಜ್ಯೋತ್ಸವ ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದಿದೆ” ಎಂದರು.

ಸಾಧನೆಗೆ ಶಿಕ್ಷಣವೇ ಮೂಲ – ಜಿ.ಯು. ಭಟ್ ಕಿವಿಮಾತು: ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ.ಯು. ಭಟ್, “ಸಾಧ್ಯವಾದಷ್ಟು ಸಮಾಜಕ್ಕೆ ಒಳ್ಳೆಯದನ್ನೇ ಮಾಡಬೇಕು ಎನ್ನುವ ತತ್ತ್ವದೊಂದಿಗೆ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಗುರುಗಳ ಸಮ್ಮುಖದಲ್ಲಿ ನಡೆದ ಈ ಸನ್ಮಾನ ನನ್ನ ಬದುಕಿನ ಸಾರ್ಥಕತೆಗೆ ಹಿಡಿದ ಕೈಗನ್ನಡಿ” ಎಂದರು.

ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, “ನಾವು ಹುಟ್ಟುವಾಗ ಬಡವರಾಗಿ ಹುಟ್ಟಿದರೂ ಸಾಯುವಾಗ ಬಡವರಾಗಿ ಸಾಯಬಾರದು. ವಿದ್ಯಾರ್ಥಿ ಜೀವನದ ೨೫ ವರ್ಷ ಕಷ್ಟಪಟ್ಟು ಓದಿದರೆ, ಉಳಿದ ೭೫ ವರ್ಷ ಸುಖವಾಗಿ ಬಾಳಬಹುದು. ಹಲವು ಸಾಧಕರ ಆದರ್ಶಗಳೇ ನನ್ನ ಬದುಕಿಗೆ ಸ್ಪೂರ್ತಿಯಾಗಿವೆ” ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷೆ ನೇತ್ರಾವತಿ ತಾಂಡೇಲ್ ವಹಿಸಿದ್ದರು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ. ಪದಾಧಿಕಾರಿಗಳಾದ ಜೋಯ್ ಡಿಸೋಜಾ, ಸುಧಾ ಶೇಟ್, ಗುರುನಾಥ ಮೇಸ್ತ, ಶೀಲಾ ಮೇಸ್ತ ಹಾಗೂ ಮಾಲಿನಿ ಮೇಸ್ತ ಉಪಸ್ಥಿತರಿದ್ದರು.

ಆರಂಭದಲ್ಲಿ ಶಿಕ್ಷಕ ಪಿ.ಆರ್. ನಾಯ್ಕ ಸ್ವಾಗತಿಸಿ, ಜಿ.ಯು. ಭಟ್ಟರ ಸುದೀರ್ಘ ಪತ್ರಿಕಾ ಪಯಣದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಸಂಧ್ಯಾ ಹೆಗಡೆ ವಂದಿಸಿದರು.

About The Author

error: Content is protected !!