November 22, 2026

ಭಟ್ಕಳದ ಅಳಿಯನಿಗೆ ಅಮೆರಿಕ ಸೆನೆಟ್‌ನಲ್ಲಿ ಐತಿಹಾಸಿಕ ಜಯ: ಅಬ್ದುಲ್ ಎಲ್-ಸಯ್ಯದ್ ಹೊಸ ದಾಖಲೆ

ಮಾಜಿ ಉಪ ಸಚಿವ ಜೆ.ಎಚ್. ಶಮ್ಶುದ್ದೀನ್ ಜುಕಾಕು ಕುಟುಂಬದ ನಂಟಿಗೆ ಜಾಗತಿಕ ಮನ್ನಣೆ

ಮಿಚಿಗನ್‌ನಲ್ಲಿ ಮೈಕ್ ರೋಜರ್ಸ್ ವಿರುದ್ಧ ಜಯ; ಅಮೆರಿಕ ಸೆನೆಟ್ ಪ್ರವೇಶಿಸಿದ ಮೊದಲ ಮುಸ್ಲಿಂ ಧುರೀಣ

ಭಟ್ಕಳ: ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ನಂಟು ಹೊಂದಿರುವ ನಾಯಕನೊಬ್ಬ ಐತಿಹಾಸಿಕ ಸಾಧನೆ ಮಾಡುವ ಮೂಲಕ ಜಾಗತಿಕ ಗಮನ ಸೆಳೆದಿದ್ದಾರೆ. ಭಟ್ಕಳದ ಮಾಜಿ ಉಪ ಸಚಿವ ದಿವಂಗತ ಜೆ.ಎಚ್. ಶಮ್ಶುದ್ದೀನ್ ಜುಕಾಕು ಅವರ ಮೊಮ್ಮಗಳ ಪತಿ (ಅಳಿಯ) ಡಾ. ಅಬ್ದುಲ್ ಎಲ್-ಸಯ್ಯದ್ ಅವರು ಅಮೆರಿಕದ ಸೆನೆಟ್ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ.

ಮಿಚಿಗನ್ ಸೆನೆಟ್ ಕ್ಷೇತ್ರದಲ್ಲಿ ರಿಪಬ್ಲಿಕನ್ ಪಕ್ಷದ ಪ್ರಬಲ ಅಭ್ಯರ್ಥಿ ಮೈಕ್ ರೋಜರ್ಸ್ ಅವರನ್ನು ಪರಾಭವಗೊಳಿಸಿರುವ ಅಬ್ದುಲ್ ಎಲ್-ಸಯ್ಯದ್, ಅಮೆರಿಕದ ಸೆನೆಟ್‌ಗೆ ಆಯ್ಕೆಯಾದ ಪ್ರಥಮ ಮುಸ್ಲಿಂ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನವೆಂಬರ್ ೪ರಂದು ಅಸೋಸಿಯೇಟೆಡ್ ಪ್ರೆಸ್ (AP) ಈ ಐತಿಹಾಸಿಕ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಿದೆ.

ಜನಪರ ಅಜೆಂಡಾದೊಂದಿಗೆ ಗೆಲುವಿನ ಪಥ: ಮಾಜಿ ಸಾರ್ವಜನಿಕ ಆರೋಗ್ಯ ಅಧಿಕಾರಿಯಾಗಿರುವ ಅಬ್ದುಲ್ ಎಲ್-ಸಯ್ಯದ್, ಸಾರ್ವಜನಿಕರಿಗೆ ಸುಲಭ ಹಾಗೂ ಕೈಗೆಟುಕುವ ಆರೋಗ್ಯ ಸೇವೆ, ಕುಟುಂಬಗಳ ಮೇಲಿನ ಜೀವನ ವೆಚ್ಚ ಇಳಿಕೆ ಹಾಗೂ ರಾಜಕೀಯದಲ್ಲಿ ಕಾರ್ಪೊರೇಟ್ ಸಂಸ್ಥೆಗಳ ಹಣಕಾಸಿನ ಪ್ರಭಾವವನ್ನು ನಿಯಂತ್ರಿಸುವ ಪ್ರಮುಖ ವಿಚಾರಗಳನ್ನಿಟ್ಟುಕೊಂಡು ಮತದಾರರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಭಟ್ಕಳದ ರಾಜಕೀಯ ಪರಂಪರೆಗೆ ಅಂತರರಾಷ್ಟ್ರೀಯ ಹೆಗ್ಗುರುತು: ಅಬ್ದುಲ್ ಎಲ್-ಸಯ್ಯದ್ ಅವರ ಪತ್ನಿ ಡಾ. ಸಾರಾ ಜುಕಾಕು ಅವರ ತಾತ ದಿವಂಗತ ಜೆ.ಎಚ್. ಶಮ್ಶುದ್ದೀನ್ ಜುಕಾಕು ಅವರು ಭಟ್ಕಳದ ಅಭಿವೃದ್ಧಿಯ ಹರಿಕಾರರಾಗಿದ್ದವರು. ೧೯೪೬ರಲ್ಲಿ ಬಾಂಬೆ ವಿಧಾನಸಭೆಗೆ ಆಯ್ಕೆಯಾಗಿದ್ದ ಅವರು, ರಾಜ್ಯಗಳ ಪುನರ್‌ವಿಂಗಡಣೆಯ ನಂತರ ೧೯೫೭ ಮತ್ತು ೧೯೬೨ರಲ್ಲಿ ಹೊನ್ನಾವರ-ಭಟ್ಕಳ ಕ್ಷೇತ್ರದಿಂದ ಮೈಸೂರು ವಿಧಾನಸಭೆಗೆ ಆಯ್ಕೆಯಾಗಿದ್ದರು.

ಅಂದಿನ ಮುಖ್ಯಮಂತ್ರಿ ಬಿ.ಡಿ. ಜತ್ತಿ ಅವರ ಸಂಪುಟದಲ್ಲಿ ಉಪ ಹಣಕಾಸು ಸಚಿವರಾಗಿ ಹಾಗೂ ಎಸ್. ನಿಜಲಿಂಗಪ್ಪ ಅವರ ಆಡಳಿತಾವಧಿಯಲ್ಲಿ ವಿದ್ಯುತ್ ಇಲಾಖೆಯ ಉಪ ಸಚಿವರಾಗಿ ಸೇವೆ ಸಲ್ಲಿಸಿದ್ದರು. ೧೯೫೪ರಿಂದ ೧೯೫೮ರವರೆಗೆ ಭಟ್ಕಳ ಪುರಸಭೆ ಅಧ್ಯಕ್ಷರಾಗಿ ರಸ್ತೆ, ಒಳಚರಂಡಿ, ವಿದ್ಯುತ್ ಹಾಗೂ ದೂರವಾಣಿ ಸಂಪರ್ಕದಂತಹ ಮೂಲಸೌಕರ್ಯಗಳಿಗೆ ಭದ್ರ ಬುನಾದಿ ಹಾಕಿದ್ದರು. ಅವರ ಸ್ಮರಣಾರ್ಥ ಭಟ್ಕಳದ ಪ್ರತಿಷ್ಠಿತ ‘ಅಂಜುಮನ್ ಹಾಮಿ-ಎ-ಮುಸ್ಲಿಮೀನ್’ ಶಿಕ್ಷಣ ಸಂಸ್ಥೆಯ ಆಡಳಿತ ಭವನಕ್ಕೆ ಅವರ ಹೆಸರನ್ನಿಡಲಾಗಿದೆ.

ದಶಕಗಳ ಹಿಂದೆ ಮೈಸೂರು ರಾಜ್ಯದ ಸಚಿವ ಸಂಪುಟದಲ್ಲಿ ಭಟ್ಕಳದ ಧ್ವನಿಯಾಗಿದ್ದ ನಾಯಕನ ಕುಟುಂಬದ ಕುಡಿ, ಇಂದು ಅಮೆರಿಕದ ಸೆನೆಟ್‌ನ ಮಹತ್ವದ ಚುನಾವಣೆಯಲ್ಲಿ ಗೆದ್ದು ಇತಿಹಾಸ ಬರೆದಿರುವುದು ಕರಾವಳಿ ಭಾಗದಲ್ಲಿ ತೀವ್ರ ಕುತೂಹಲ ಹಾಗೂ ಹೆಮ್ಮೆಯ ವಾತಾವರಣ ನಿರ್ಮಿಸಿದೆ.

About The Author

error: Content is protected !!