November 22, 2026

ಉತ್ತರ ಕನ್ನಡ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಸಿಎಂ ನೇತೃತ್ವದಲ್ಲಿ ‘ಚಿಂತನ ಮಂಥನ ಸಭೆ’ ನಡೆಸಿ: ಚಂದ್ರಕಾಂತ ಕೊಚರೇಕರ ಆಗ್ರಹ

ಅರಣ್ಯ ಹಕ್ಕು ಕಾಯ್ದೆ ತಿದ್ದುಪಡಿಗೆ ಕೇಂದ್ರಕ್ಕೆ ದೆಹಲಿ ನಿಯೋಗ ಒಯ್ಯಲು ಮುಖ್ಯಮಂತ್ರಿಗಳಿಗೆ ಮನವಿ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಹಾಗೂ ಅಗತ್ಯಕ್ಕಿಂತ ಹೆಚ್ಚಿನ ವಾಣಿಜ್ಯ ಬಂದರು ನಿರ್ಮಾಣ ಕೈಬಿಡಲು ಒತ್ತಾಯ

ಕಾರವಾರ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಜಿಲ್ಲೆಯ ಸೂಕ್ಷ್ಮ ಪರಿಸರ ಮತ್ತು ಜನಜೀವನಕ್ಕೆ ಪೂರಕವಾದ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಲು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಜನಪ್ರತಿನಿಧಿಗಳು, ಸಾಮಾಜಿಕ ಹೋರಾಟಗಾರರು ಹಾಗೂ ಉನ್ನತಾಧಿಕಾರಿಗಳ ‘ಚಿಂತನ ಮಂಥನ ಸಭೆ’ ಏರ್ಪಡಿಸಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟ ಸಂಘಟನೆಗಳ ರಾಜ್ಯ ಸಮಿತಿ ಅಧ್ಯಕ್ಷ, ಸಾಮಾಜಿಕ ಹೋರಾಟಗಾರ ಚಂದ್ರಕಾಂತ ಕೊಚರೇಕರ ಆಗ್ರಹಿಸಿದ್ದಾರೆ.

ಈ ಕುರಿತು ರಾಜ್ಯದ ಮುಖ್ಯಮಂತ್ರಿಗಳು, ಅರಣ್ಯ ಸಚಿವರು, ಬಂದರು ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬರೆದ ಪತ್ರವನ್ನು ಬಿಡುಗಡೆ ಮಾಡಿರುವ ಅವರು, ಜಿಲ್ಲೆಯ ಶಾಸಕರು ಕೂಡಲೇ ಮಧ್ಯಪ್ರವೇಶಿಸಿ ಈ ಕುರಿತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ದೆಹಲಿಗೆ ಸಿಎಂ ನೇತೃತ್ವದ ನಿಯೋಗ ಒಯ್ಯಲು ಆಗ್ರಹ: ವಸತಿ ಮತ್ತು ಜೀವನೋಪಾಯಕ್ಕಾಗಿ ೨೦೦೫ರ ಪೂರ್ವದಿಂದಲೂ ಅರಣ್ಯ ಭೂಮಿಯನ್ನು ಅವಲಂಬಿಸಿರುವ ನಿವಾಸಿಗಳಿಗೆ ಭೂಮಿಯ ಅಧಿಭೋಗದ ಹಕ್ಕು ನೀಡಲು ಅನುಕೂಲವಾಗುವಂತೆ ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನದಲ್ಲಿರುವ ಗೊಂದಲಗಳನ್ನು ಬಗೆಹರಿಸಬೇಕು. ೧೯೭೮ರ ಪೂರ್ವದ ಬಿಟ್ಟುಹೋದ ಅತಿಕ್ರಮಣ ಭೂಮಿಯನ್ನು ಪುನರ್ ಪರಿಶೀಲಿಸಿ ಸಕ್ರಮಗೊಳಿಸಬೇಕು. ಕಾಯ್ದೆಯ ಸರಳೀಕರಣಕ್ಕಾಗಿ ಕೇಂದ್ರದ ಮುಂದೆ ಇರುವ ರಾಜ್ಯದ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ಪಡೆಯಲು ಮುಖ್ಯಮಂತ್ರಿಗಳೇ ಖುದ್ದಾಗಿ ದೆಹಲಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ದು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ಪರಿಸರ ವಿರೋಧಿ ಯೋಜನೆಗಳಿಗೆ ವಿರೋಧ: ಜಿಲ್ಲೆಯ ಧಾರಣಾ ಸಾಮರ್ಥ್ಯದ (Carrying Capacity) ವೈಜ್ಞಾನಿಕ ಅಧ್ಯಯನ ನಡೆಸದೇ, ಜನಜೀವನಕ್ಕೆ ಆತಂಕ ತರುವ ಅಗತ್ಯಕ್ಕಿಂತ ಹೆಚ್ಚಿನ ವಾಣಿಜ್ಯ ಬಂದರುಗಳ ನಿರ್ಮಾಣವನ್ನು ಕೈಬಿಡಬೇಕು. ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಭೂಕುಸಿತ ವಲಯದಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿಜ್ಞಾನಿಗಳು ಹಾಗೂ ಕೇಂದ್ರದ ಅಧ್ಯಯನ ತಂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಶರಾವತಿ ಕಣಿವೆಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಕೊಚರೇಕರ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.

ಜಿಲ್ಲೆಯ ಸೂಕ್ಷ್ಮ ಪರಿಸರ ಹಾಗೂ ಸ್ಥಳೀಯ ಜನರ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಅಭಿವೃದ್ಧಿಗೆ ಪೂರಕವಾದ ನಿರ್ಧಾರಗಳನ್ನು ಕೈಗೊಳ್ಳಲು ಸರ್ಕಾರ ತಕ್ಷಣವೇ ಉನ್ನತ ಮಟ್ಟದ ಸಭೆ ಕರೆಯಬೇಕೆಂದು ಅವರು ಮನವಿ ಮಾಡಿದ್ದಾರೆ.

About The Author

error: Content is protected !!