ಅರ್ಹರು ಸೌಲಭ್ಯದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತಗಳಿಗೆ ನಿರ್ದೇಶನ: ಚಂದ್ರಕಾಂತ ಕೊಚರೇಕರ
ಕಾರವಾರ/ಬೆಳಗಾವಿ: ಅರಣ್ಯ ಭೂಮಿ ಸಾಗುವಳಿದಾರರು ತಮ್ಮ ಅಧೀನದಲ್ಲಿರುವ ಭೂಮಿಯ ಅಧಿಭೋಗದ ಹಕ್ಕಿಗಾಗಿ ೨೦೦೬ರ ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಸಿರುವ ಎಲ್ಲ ಕ್ಲೇಮು ಅರ್ಜಿಗಳ ಪುನರ್ ಪರಿಶೀಲನೆ ನಡೆಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಆದೇಶಿಸಿದ್ದಾರೆ. ಯಾವುದೇ ಅರ್ಹ ಅರಣ್ಯವಾಸಿಗಳು ಕಾಯ್ದೆಯ ಸೌಲಭ್ಯದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕೆಂದು ಆಯಾ ಜಿಲ್ಲಾಡಳಿತಗಳಿಗೆ ಮತ್ತೊಮ್ಮೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಈ ಕುರಿತು ಬೆಳಗಾವಿ ಪ್ರಾದೇಶಿಕ ಆಯುಕ್ತರು ಅರಣ್ಯ ಭೂಮಿ ಹಕ್ಕು ಹೋರಾಟ ಸಂಘಟನೆಗಳ ರಾಜ್ಯ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಅವರಿಗೆ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ ಎಂದು ಹೋರಾಟ ಸಮಿತಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

೪ ಅಧಿಕಾರಿಗಳಿದ್ದ ಸ್ಥಳ ಮಹಜರು ಸಮಿತಿ ರಚನೆ: ಈಗಾಗಲೇ ತಿರಸ್ಕೃತಗೊಂಡಿರುವ ಹಾಗೂ ವಿಚಾರಣೆಗೆ ಬಾಕಿ ಇರುವ ಎಲ್ಲ ಅರಣ್ಯ ಹಕ್ಕು ಕ್ಲೇಮು ಅರ್ಜಿಗಳ ಸ್ಥಳ ಮಹಜರು ನಡೆಸಲು ನಾಲ್ಕು ಅಧಿಕಾರಿಗಳನ್ನು ಒಳಗೊಂಡ ವಿಶೇಷ ಸಮಿತಿಯನ್ನು ರಚಿಸಲಾಗಿದೆ. ಗ್ರಾಮ ಪಂಚಾಯಿತಿಯ ಪಿಡಿಒ, ಗ್ರಾಮ ಆಡಳಿತ ಅಧಿಕಾರಿ (VA), ವಲಯ ಸಂರಕ್ಷಣಾಧಿಕಾರಿ (RFO) ಹಾಗೂ ಭೂಮಾಪಕರು (Surveyor) ಈ ಸಮಿತಿಯಲ್ಲಿ ಇರಲಿದ್ದಾರೆ.
ಇದರ ಜೊತೆಗೆ ಪ್ರತಿ ತಾಲೂಕು ಮಟ್ಟದಲ್ಲಿ ಸಹಾಯಕ ಆಯುಕ್ತರ (AC) ಅಧ್ಯಕ್ಷತೆಯಲ್ಲಿ ೬ ಸದಸ್ಯರುಳ್ಳ ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಗಿದೆ. ಗ್ರಾಮ ಹಾಗೂ ಉಪವಿಭಾಗ ಮಟ್ಟದಲ್ಲಿ ತಿರಸ್ಕೃತಗೊಂಡಿರುವ ಪರಿಶಿಷ್ಟ ಪಂಗಡ ಹಾಗೂ ಇತರ ಪಾರಂಪರಿಕ ಅರಣ್ಯವಾಸಿಗಳ ಅರ್ಜಿ ಪರಿಶೀಲಿಸಿ, ಸ್ಥಳ ಪರಿಶೀಲನಾ ಸಮಿತಿ ನೀಡುವ ವರದಿಯನ್ನು ಈ ಸಮಿತಿ ವಾರಕ್ಕೊಮ್ಮೆ ಪರಿಶೀಲಿಸಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಸಲ್ಲಿಸಲಿದೆ.
ಸ್ಥಳ ಪರಿಶೀಲನಾ ಸಮಿತಿಯ ಪ್ರಮುಖ ಕಾರ್ಯಗಳು:
- ಅರ್ಜಿದಾರರಿಗೆ ಸ್ಥಳ ಮಹಜರು ನಡೆಸುವ ೨-೩ ದಿನ ಮುಂಚಿತವಾಗಿ ನೋಟಿಸ್ ನೀಡಿ ತಿಳಿಸುವುದು.
- ಅರ್ಜಿದಾರರು ಅರಣ್ಯ ಅತಿಕ್ರಮಣ ಭೂಮಿಯನ್ನೇ ಜೀವನೋಪಾಯಕ್ಕೆ ಅವಲಂಬಿಸಿದ್ದಾರೆಯೇ ಅಥವಾ ಅವರಿಗೆ ಇತರೆ ಆದಾಯದ ಮೂಲವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು.
- ಅರಣ್ಯ ಹಕ್ಕು ಕಾಯ್ದೆ ನಿಯಮ ೧೩(೧)ರ ಅಡಿಯಲ್ಲಿ ಅರ್ಜಿದಾರರು ಒದಗಿಸಿರುವ ಸಾಕ್ಷ್ಯಗಳು ಹಾಗೂ ಸ್ಥಳದಲ್ಲಿನ ಸಾಂದರ್ಭಿಕ ಸಾಕ್ಷ್ಯಗಳನ್ನು ದಾಖಲಿಸುವುದು.
- ಸ್ಥಳ ಪರಿಶೀಲನೆ ನಡೆಸಿದ ಬಳಿಕ ನೆರೆಹೊರೆಯ ಕುಟುಂಬದವರಿಂದ ಸಾಕ್ಷ್ಯಕ್ಕಾಗಿ ಸಹಿ ಪಡೆದು ನಿಗದಿತ ಕಾಲಮಿತಿಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವುದು.
ಮೂರು ತಲೆಮಾರಿನ ಶರತ್ತು ಸರಳೀಕರಣಗೊಳ್ಳಲಿ: ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿರುವ ಅರಣ್ಯ ಭೂಮಿ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ಚಂದ್ರಕಾಂತ ಕೊಚರೇಕರ, “ಇತರ ಪಾರಂಪರಿಕ ಅರಣ್ಯವಾಸಿಗಳಿಗೆ ಅಧಿಭೋಗದ ಹಕ್ಕು ನೀಡಲು ಇರುವ ಮೂರು ತಲೆಮಾರಿನ (೭೫ ವರ್ಷ) ಶರತ್ತಿನ ಗೊಂದಲ ಪರಿಹಾರವಾಗಬೇಕು. ಈ ಶರತ್ತಿನ ಸರಳೀಕರಣ ಅಗುವವರೆಗೆ ಸ್ಥಳೀಯ ಸಾಂದರ್ಭಿಕ ಸಾಕ್ಷ್ಯಗಳನ್ನು ಕ್ರೋಡೀಕರಿಸಿ ನೈಸರ್ಗಿಕ ನ್ಯಾಯದ ತತ್ತ್ವದಡಿ ಅರ್ಹರಿಗೆ ಹಕ್ಕುಪತ್ರ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ಅಲ್ಲದೆ, ನ್ಯಾಯದಾನದ ಅಂತಿಮ ಹಂತದವರೆಗೂ ಅರಣ್ಯವಾಸಿಗಳ ಹಕ್ಕಿಗೆ ಚ್ಯುತಿ ತರುವ ಅಥವಾ ಅವರನ್ನು ಒಕ್ಕಲೆಬ್ಬಿಸುವ ಯಾವುದೇ ಯತ್ನಗಳಿಗೆ ಸರ್ಕಾರ ಆಸ್ಪದ ನೀಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.

More Stories
ಅಥಣಿ: ಉರ್ದು ಕ್ಲಸ್ಟರ್ ಪ್ರತಿಭಾ ಕಾರಂಜಿಯಲ್ಲಿ ಅಬುಲ್ ಕಲಾಂ ಶಾಲೆಗೆ ಸತತ ಎರಡನೇ ಬಾರಿ ಪ್ರಥಮ ಸ್ಥಾನ
ಕ್ಲಸ್ಟರ್ ಕಿಚನ್ಗೆ ತೀವ್ರ ವಿರೋಧ: ಜಿಪಂಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಅಕ್ಷರದಾಸೋಹ ನೌಕರರು
ಸುಳ್ಳು ಜಾತಿ ಪ್ರಮಾಣಪತ್ರಗಳ ಹಾವಳಿ ತಡೆಗೆ ನೈಜ ಪರಿಶಿಷ್ಟರ ಆಗ್ರಹ; ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ‘ಆರ್.ಡಿ. ನಂಬರ್’ ಕಡ್ಡಾಯಗೊಳಿಸಲು ಮನವಿ