ಕಾರವಾರ, ನವೆಂಬರ್ 16: ಪಿ.ಎಂ. ಪೋಷಣ್ ಶಕ್ತಿ ನಿರ್ಮಾಣ ಯೋಜನೆಯಡಿ ಶಾಲೆಗಳಲ್ಲಿ ಕೇಂದ್ರೀಕೃತ ‘ಕ್ಲಸ್ಟರ್ ಕಿಚನ್’ (Cluster Kitchen) ರಚಿಸುವ ಶಿಕ್ಷಣ ಇಲಾಖೆಯ ಪ್ರಸ್ತಾವನೆಯನ್ನು ವಿರೋಧಿಸಿ, ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ (ಸಿಐಟಿಯು) ನೇತೃತ್ವದಲ್ಲಿ ನೌಕರರು ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಿದರು. ಈ ವೇಳೆ ಸರ್ಕಾರದ ಧೋರಣೆ ವಿರುದ್ಧ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮಕ್ಕಳ ಹಕ್ಕು ಮತ್ತು ಮಹಿಳೆಯರ ಉದ್ಯೋಗಕ್ಕೆ ಕುತ್ತು: ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ನವೆಂಬರ್ 7ರಂದು ಕ್ಲಸ್ಟರ್ ಕಿಚನ್ ಸಾಧಕ-ಬಾಧಕಗಳ ಕುರಿತು ಅಭಿಪ್ರಾಯ ಕೋರಿ ಸುತ್ತೋಲೆ ಹೊರಡಿಸಿದ್ದಾರೆ. ಆದರೆ, ಕ್ಲಸ್ಟರ್ ಕಿಚನ್ ವ್ಯವಸ್ಥೆಯು ಮಕ್ಕಳನ್ನು ಸ್ಥಳದಲ್ಲೇ ತಯಾರಿಸಿದ ತಾಜಾ, ಬಿಸಿ-ಬಿಸಿ ಆಹಾರದಿಂದ ವಂಚಿತರನ್ನಾಗಿಸುತ್ತದೆ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ, ಇದು ದಶಕಗಳಿಂದ ದುಡಿಯುತ್ತಿರುವ ಬಡ ಮಹಿಳಾ ಅಡುಗೆ ಸಿಬ್ಬಂದಿಯ ಉದ್ಯೋಗ ಕಸಿಯುವ ಮತ್ತು ಯೋಜನೆಯನ್ನು ಖಾಸಗಿಯವರ ಪಾಲು ಮಾಡುವ ಹುನ್ನಾರವಾಗಿದೆ ಎಂದು ಆರೋಪಿಸಲಾಗಿದೆ.

ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ: 2001ರ ಸುಪ್ರೀಂ ಕೋರ್ಟ್ ಆದೇಶದಂತೆ 6 ವರ್ಷ ಮೇಲ್ಪಟ್ಟ ಮಕ್ಕಳಿಗೆ ಶಾಲಾ ಆವರಣದಲ್ಲೇ ಪೌಷ್ಟಿಕಾಂಶಯುಕ್ತ ಬಿಸಿ ಆಹಾರ ತಯಾರಿಸಿ ಬಡಿಸಬೇಕು. ಇದಕ್ಕಾಗಿ ಸರ್ಕಾರಗಳು ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿ ಪ್ರತಿ ಶಾಲೆಯಲ್ಲೂ ಅಡುಗೆ ಕೋಣೆ ಹಾಗೂ ಪರಿಕರಗಳನ್ನು ಒದಗಿಸಿವೆ. ಹೀಗಿರುವಾಗ ಕ್ಲಸ್ಟರ್ ಕಿಚನ್ ರಚಿಸುವುದು ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ನೆಗಡಿಯಾದರೆ ಮೂಗು ಕತ್ತರಿಸುವ ಸರ್ಕಾರದ ನೀತಿ – ಯಮುನಾ ಗಾಂವ್ಕರ್: ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಸಮಿತಿ ಅಧ್ಯಕ್ಷರಾದ ಯಮುನಾ ಗಾಂವ್ಕರ್, “ನೆಗಡಿಯಾದರೆ ಮೂಗು ಕತ್ತರಿಸುವ ಸರ್ಕಾರದ ನೀತಿಯಂತೆ ಶಿಕ್ಷಣ ಇಲಾಖೆ ನಡೆದುಕೊಳ್ಳುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರ ಸತತವಾಗಿ ಅನುದಾನ ಕಡಿತಗೊಳಿಸುತ್ತಿದ್ದರೂ, ಅತ್ಯಂತ ನಿಕೃಷ್ಟ ಗೌರವಧನಕ್ಕೆ ದುಡಿಯುತ್ತ ಅಕ್ಷರದಾಸೋಹ ನೌಕರರು ಮಕ್ಕಳಿಗಾಗಿ ಪ್ರೀತಿಯ ಕೈತುತ್ತು ನೀಡುತ್ತಿದ್ದಾರೆ. ಕೆಲವು ಶಾಲೆಗಳನ್ನು ಹೊರತುಪಡಿಸಿ ಬಹುತೇಕ ಕಡೆ ಶೌಚಾಲಯ ತೊಳೆಯುವುದು, ಆವರಣ ಸ್ವಚ್ಛಗೊಳಿಸುವುದು, ಚುನಾವಣಾ ಕೆಲಸ, ಪ್ರತಿಭಾ ಕಾರಂಜಿ ಸೇರಿದಂತೆ ಹತ್ತುಹಲವು ಹೆಚ್ಚುವರಿ ಕೆಲಸಗಳನ್ನು ಪುಕ್ಕಟೆಯಾಗಿ ಮಾಡಿಸಿಕೊಳ್ಳುವ ಸರ್ಕಾರಕ್ಕೆ ನಮ್ಮ ಸಂಕಷ್ಟ ಕಾಣಿಸುತ್ತಿಲ್ಲವೇ? ಕೋಟ್ಯಾಂತರ ರೂಪಾಯಿ ಸಹಾಯಧನವನ್ನು ಶ್ರೀಮಂತರಿಗೆ ಮನ್ನಾ ಮಾಡುವ ಸರ್ಕಾರಕ್ಕೆ ಬಡವರು ಕಾಣುವುದಿಲ್ಲವೇ?” ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಅಡುಗೆ ಕೆಲಸವನ್ನು ಸಂಪೂರ್ಣವಾಗಿ ನಮಗೆ ವಹಿಸಬೇಕು, ಲೆಕ್ಕ ಬರೆಯಲು ತರಬೇತಿ ನೀಡಬೇಕು ಅಥವಾ ಬದಲಿ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಎಂತಹ ಮೂರ್ಖ ಯೋಚನೆ ಇದು? – ಗಂಗಾ ನಾಯ್ಕ: ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾ ನಾಯ್ಕ ಮಾತನಾಡಿ, “ಅಕ್ಷರದಾಸೋಹ ಯೋಜನೆಯನ್ನು ಉಳಿಸಿಕೊಳ್ಳಲು ನಾವು ಈ ಹೋರಾಟ ಮಾಡುತ್ತಿದ್ದೇವೆ. ಶಿಕ್ಷಕರ ಸಂಘದ ಕೆಲವರ ಹಿತಾಸಕ್ತಿಗಾಗಿ ಅತ್ಯುತ್ತಮವಾಗಿ ನಡೆಯುತ್ತಿರುವ ವ್ಯವಸ್ಥೆಯನ್ನು ಅಲ್ಲಗಳೆಯಬೇಡಿ. ಅನೇಕ ಶಿಕ್ಷಕರು ಸಹ ಬಿಸಿಯೂಟ ವ್ಯವಸ್ಥೆಯ ಪರವಾಗಿದ್ದಾರೆ. ಕ್ಲಸ್ಟರ್ ಮಟ್ಟದಲ್ಲಿ ಖಾಸಗಿಯವರಿಗೆ ಬಿಸಿಅಡುಗೆ ವ್ಯವಸ್ಥೆ ವಹಿಸಿದ ಕೂಡಲೇ ಶೈಕ್ಷಣಿಕ ಸಮಸ್ಯೆ ಬಗೆಹರಿಯುತ್ತದೆಯೇ? ಈ ಸಲಹೆ ಕೊಟ್ಟವರಿಗೆ ಮತ್ತು ಅದನ್ನು ಆದೇಶ ಮಾಡಿದವರಿಗೆ ಎಂತಹ ಮೂರ್ಖ ಯೋಚನೆ ಇದು ಅನ್ನಿಸುವುದಿಲ್ಲವೇ? ಕೂಡಲೇ ಈ ಆದೇಶ ವಾಪಸ್ ಪಡೆಯಬೇಕು ಮತ್ತು ಅಡುಗೆಯವರಿಗೆ ಕನಿಷ್ಠ ಕೂಲಿ, ನಿವೃತ್ತಿ ವೇತನ ಹಾಗೂ ಕೆಲಸದ ಭದ್ರತೆ ಒದಗಿಸಬೇಕು” ಎಂದು ಒತ್ತಾಯಿಸಿದರು.
ನಮ್ಮನ್ನು ಬೀದಿಪಾಲು ಮಾಡಲಾಗುತ್ತಿದೆ – ವಂದನಾ ದುಮೆ: ಜೋಯಿಡಾ ತಾಲೂಕು ಅಧ್ಯಕ್ಷರಾದ ವಂದನಾ ದುಮೆ ಅಳಲು ತೋಡಿಕೊಳ್ಳುತ್ತಾ, “ಏಕೋಪಾಧ್ಯಾಯ ಶಾಲೆಯ ಕೆಲಸವನ್ನೂ, ಮಕ್ಕಳ ಬೇಕುಬೇಡಗಳನ್ನೂ ನೋಡಿಕೊಂಡು ನಮ್ಮಿಂದ ಬಿಸಿಅಡುಗೆ ಕೈತುತ್ತು ನೀಡಲಾಗುತ್ತಿದೆ. 2001ರಲ್ಲಿ ಈ ಯೋಜನೆ ಆರಂಭವಾದಾಗ ಯಾರೂ ಕೆಲಸಕ್ಕೆ ಸೇರಲು ಮುಂದೆ ಬಂದಿರಲಿಲ್ಲ. ಆದರೆ ನಾವು ಮಕ್ಕಳಿಗಾಗಿ ಸೇರಿಕೊಂಡೆವು. ಇಂದು ಎರಡೂ ಸರ್ಕಾರಗಳು ನಮ್ಮನ್ನು ಬೀದಿಗಿಳಿಸಿ ಬೀದಿಪಾಲು ಮಾಡುತ್ತಿವೆ. ನಾವೆಲ್ಲರೂ ಮಧ್ಯವಯಸ್ಸಿನವರು, ಒಂಟಿ ಮಹಿಳೆಯರು ಅಥವಾ ಪರಿತ್ಯಕ್ತೆಯರಾಗಿದ್ದು, ನಾಳೆ ಯಾವ ಸ್ವರೂಪದಲ್ಲಿ ಸಮಾಜದಲ್ಲಿ ಜೀವಿಸಬೇಕು ಹೇಳಿ?” ಎಂದು ಪ್ರಶ್ನಿಸಿ ಕಣ್ಣೀರಿಟ್ಟರು.
ಸಂಘಟನೆಯ ಪ್ರಮುಖ ಬೇಡಿಕೆಗಳು:
ಅಡುಗೆ ಸಿಬ್ಬಂದಿಗೇ ಸಂಪೂರ್ಣ ಹೊಣೆ: ಅಡುಗೆ ಸಿಬ್ಬಂದಿಯಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಪದವೀಧರರೂ ಇದ್ದು, ಅವರಿಗೆ ಸೂಕ್ತ ತರಬೇತಿ ನೀಡಿ ಬಿಸಿಯೂಟ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ವಹಿಸಬೇಕು.
ಶಿಕ್ಷಕರಿಗೆ ಹೊರೆ ಬೇಡ: ಶಿಕ್ಷಕರು ಬೋಧನೆಯತ್ತ ಗಮನ ಹರಿಸಲು ಅನುಕೂಲವಾಗುವಂತೆ, ಮುಖ್ಯ ಅಡುಗೆಯವರು ಮತ್ತು ಎಸ್ಡಿಎಂಸಿ ಅಧ್ಯಕ್ಷರ ಜಂಟಿ ಖಾತೆಯ ಮೂಲಕವೇ ಯೋಜನೆ ನಿರ್ವಹಿಸಬೇಕು.
ಮೊಟ್ಟೆ ನೇರ ಸರಬರಾಜು: ಮೊಟ್ಟೆ ಬೆಲೆ ಏರಿಕೆ ಸಮಸ್ಯೆ ತಪ್ಪಿಸಲು, ಅಂಗನವಾಡಿ ಕೇಂದ್ರಗಳ ಮಾದರಿಯಲ್ಲೇ ಕುಕ್ಕುಟ ಮಹಾಮಂಡಳಿಯಿಂದ ನೇರವಾಗಿ ಶಾಲೆಗಳಿಗೆ ಮೊಟ್ಟೆ ಸರಬರಾಜು ಮಾಡಬೇಕು.
ಪ್ರತಿಭಟನೆಯ ಬಳಿಕ ಸ್ಥಳಕ್ಕೆ ಆಗಮಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ (ಸಿಇಒ) ಬಳಿ ಹೋರಾಟಗಾರರು ತಮ್ಮ ಸಂಕಷ್ಟಗಳನ್ನು ತೋಡಿಕೊಂಡರು. ಈ ಬೃಹತ್ ಪ್ರತಿಭಟನೆಯಲ್ಲಿ ಕೋಮಲಾ ದೇವಾಡಿಗ, ತುಳಸಿ ನಾಯ್ಕ, ಶ್ರೀಮತಿ ನಾಯ್ಕ, ತಾರಾ, ರೇಣುಕಾ ಮಡಿವಾಳ, ವರದಾ ಅಂಕೋಲೆಕರ್, ಯಶೋದಾ ನಾಯ್ಕ, ಭಾರತಿ ಮರಾಠಿ, ಲಕ್ಷ್ಮಿ ನಾಯ್ಕ, ಜಯಶ್ರೀ ಗೌಡ, ಮಮತಾ, ಶೋಭಾ, ಗೀತಾ ಗೌಡ, ನಾಗರತ್ನ, ರೂಪಾ ಪಾಠಣಕರ್, ಶಾಂತಾ ರಾಯ್ಕರ್, ಶೋಭಾ ಕುರಟ್ಟಿ, ಹಸೀನಾ ಶೇಖ್, ಗಿರಿಜಾ ವಾಡ್ಕರ್ ಹಾಗೂ ಎಸ್.ಎಫ್.ಐ ನ ಶೇಕಪ್ಪ ಪಿ ಸೇರಿದಂತೆ ನೂರಾರು ಅಕ್ಷರದಾಸೋಹ ನೌಕರರು ನೇತೃತ್ವ ವಹಿಸಿದ್ದರು.

More Stories
ಸುಳ್ಳು ಜಾತಿ ಪ್ರಮಾಣಪತ್ರಗಳ ಹಾವಳಿ ತಡೆಗೆ ನೈಜ ಪರಿಶಿಷ್ಟರ ಆಗ್ರಹ; ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ‘ಆರ್.ಡಿ. ನಂಬರ್’ ಕಡ್ಡಾಯಗೊಳಿಸಲು ಮನವಿ
ಉತ್ತರ ಕನ್ನಡ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಸಿಎಂ ನೇತೃತ್ವದಲ್ಲಿ ‘ಚಿಂತನ ಮಂಥನ ಸಭೆ’ ನಡೆಸಿ: ಚಂದ್ರಕಾಂತ ಕೊಚರೇಕರ ಆಗ್ರಹ
ಅರಣ್ಯ ಭೂಮಿ ಹಕ್ಕು ಅರ್ಜಿಗಳ ಪುನರ್ ಪರಿಶೀಲನೆಗೆ ಸರ್ಕಾರ ಆದೇಶ: ಕಂದಾಯ, ಅರಣ್ಯ ಇಲಾಖೆಗೆ ಸಿಎಸ್ ಸೂಚನೆ