November 23, 2026

ಕೂಡ್ಲಿಗಿ: ಭಾರಿ ಶಬ್ದದ ಪಟಾಕಿ ಬಳಕೆಗೆ ಬ್ರೇಕ್ ಹಾಕಿ; ಪ್ರಾಣಿ-ಪಕ್ಷಿ, ರೋಗಿಗಳ ಸಂಕಟಕ್ಕೆ ಸ್ಪಂದಿಸಲು ಆಗ್ರಹ

ಪಟಾಕಿ ಶಬ್ದಕ್ಕೆ ಪಕ್ಷಿಗಳು ಬಲಿ; ಕಠಿಣ ಕಾನೂನು ಕ್ರಮ ಜಾರಿಗೆ ಹೋರಾಟಗಾರರು, ಪರಿಸರ ಪ್ರೇಮಿಗಳ ಒತ್ತಾಯ

ಕೂಡ್ಲಿಗಿ (ವಿಜಯನಗರ): ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಸಿಡಿಸಲಾದ ಭಾರಿ ಶಬ್ದದ ಹಾಗೂ ಪರಿಸರ ಮಾಲಿನ್ಯಕಾರಕ ಪಟಾಕಿಗಳ ಭರಾಟೆಯಿಂದಾಗಿ ಪ್ರಾಣಿ-ಪಕ್ಷಿಗಳು ಬಲಿಯಾಗುತ್ತಿದ್ದು, ನವಜಾತ ಶಿಶುಗಳು, ವಯೋವೃದ್ಧರು ಹಾಗೂ ಹೃದ್ರೋಗಿಗಳು ತೀವ್ರ ಪ್ರಾಣ ಸಂಕಟ ಅನುಭವಿಸುತ್ತಿದ್ದಾರೆ ಎಂದು ಹೋರಾಟಗಾರರು ಹಾಗೂ ಪರಿಸರ ಪ್ರೇಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ರಾಜೀವ್‌ಗಾಂಧಿ ನಗರದಲ್ಲಿ ಇತ್ತೀಚೆಗೆ ಸಂಭವಿಸಿದ ಭಾರಿ ಶಬ್ದದ ಪಟಾಕಿ ಸ್ಪೋಟದ ತೀವ್ರತೆಗೆ ಮರಗಳಲ್ಲಿದ್ದ ಗಿಳಿ ಸೇರಿದಂತೆ ಹಲವು ಪಕ್ಷಿಗಳು ಸ್ಥಳದಲ್ಲೇ ಸತ್ತು ಬಿದ್ದಿದ್ದು, ಉಳಿದ ಪಕ್ಷಿಗಳು ಭಯದಿಂದ ಅರಣ್ಯ ಪ್ರದೇಶದತ್ತ ಕಳೆದುಹೋಗಿವೆ. ಸಾಕುಪ್ರಾಣಿಗಳು ಕೂಡ ಶಬ್ದದ ಅಲೆಯ ತೀವ್ರತೆಗೆ ನರಳಾಡುವಂತಾಗಿದೆ ಎಂದು ಹೋರಾಟಗಾರರು ದೂರಿದ್ದಾರೆ.

ಅತಿ ಸೂಕ್ಷ್ಮ ಮನಸ್ಸಿನವರಿಗೆ, ರೋಗಿಗಳಿಗೆ ಯಾತನೆ: “ವಿಪರೀತ ಶಬ್ದದ ಪಟಾಕಿಗಳಿಂದಾಗಿ ಹಸುಗೂಸುಗಳು ಬೆಚ್ಚಿಬೀಳುತ್ತಿದ್ದು, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು, ಕಿವಿ ಶಸ್ತ್ರಚಿಕಿತ್ಸೆಗೊಳಗಾದವರು, ಮಾನಸಿಕ ಅಸ್ವಸ್ಥರು ಹಾಗೂ ವಯೋವೃದ್ಧರು ನಿರಂತರವಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ. ಪರಿಸರ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಮಾರಕವಾಗಿರುವ ಇಂತಹ ಶಬ್ದ ಮಾಲಿನ್ಯಕ್ಕೆ ತಕ್ಷಣವೇ ಕಡಿವಾಣ ಬೀಳಬೇಕು” ಎಂದು ಜಾಗೃತಿ ವೇದಿಕೆಗಳು ಆಗ್ರಹಿಸಿವೆ.

ಸ್ಥಳೀಯ ಆಡಳಿತದ ಕಠಿಣ ಕ್ರಮಕ್ಕೆ ಒತ್ತಾಯ: ತಾಲೂಕಾಡಳಿತ, ಸ್ಥಳೀಯ ಪಟ್ಟಣ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ತಕ್ಷಣವೇ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅತಿಯಾದ ಶಬ್ದ ಉಂಟುಮಾಡುವ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು. ಪೋಷಕರು ಮತ್ತು ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಭಾರಿ ಶಬ್ದದ ಪಟಾಕಿಗಳನ್ನು ಬಹಿಷ್ಕರಿಸಲು ಸಂಕಲ್ಪ ಮಾಡಬೇಕು ಎಂದು ವಂದೇ ಮಾತರಂ ಜಾಗೃತಿ ವೇದಿಕೆ, ಕಮ್ಯೂನಿಸ್ಟ್ ಪಕ್ಷ, ಕಾರ್ಮಿಕ ಹಾಗೂ ದಲಿತಪರ ಸಂಘಟನೆಗಳು, ರೈತ ಮತ್ತು ಮಹಿಳಾ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಹಾಗೂ ಪರಿಸರ ಪ್ರೇಮಿಗಳು ಜಂಟಿಯಾಗಿ ಒತ್ತಾಯಿಸಿದ್ದಾರೆ.

– ವರದಿ: ವಿ.ಜಿ. ವೃಷಭೇಂದ್ರ, ಕೂಡ್ಲಿಗಿ

About The Author

error: Content is protected !!