ಸಿ.ಎಸ್. ಪುರಕ್ಕೆ ಕೆಪಿಎಸ್ ಶಾಲೆ ಮಂಜೂರು: ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸದಂತೆ ಶಾಸಕರ ಕರೆ
ಕೂಡ್ಲಿಗಿ (ವಿಜಯನಗರ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ಕೂಡ್ಲಿಗಿ ಇವುಗಳ ಜಂಟಿ ಆಶ್ರಯದಲ್ಲಿ ಗುಡೆಕೋಟೆ ಹೋಬಳಿ ಮಟ್ಟದ ‘ಪ್ರಜಾ ಸೇವಾ ಆಂದೋಲನ’ ಕಾರ್ಯಕ್ರಮವು ತಾಲೂಕಿನ ಚಂದ್ರಶೇಖರಪುರ ಗ್ರಾಮದಲ್ಲಿ ಜರುಗಿತು.







ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಚಂದ್ರಶೇಖರಪುರ ಹಾಗೂ ರಾಮದುರ್ಗ ಗ್ರಾಮಗಳೊಂದಿಗೆ ತಮ್ಮ ಕುಟುಂಬಕ್ಕೆ ತಂದೆಯವರ ಕಾಲದಿಂದಲೂ ಅವಿನಾಭಾವ ಸಂಬಂಧವಿದೆ. ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ” ಎಂದರು.

ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿಗೆ ಕರೆ: “ಯಾವುದೇ ಮಗು ಆರ್ಥಿಕ ಹಾಗೂ ಸಾಮಾಜಿಕ ಕಾರಣಗಳಿಂದ ಶಿಕ್ಷಣದಿಂದ ವಂಚಿತವಾಗಬಾರದು. ಪೋಷಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕಲ್ಪಿಸಬೇಕು. ಇದರ ಜೊತೆಗೆ ಪೋಕ್ಸೋ ಪ್ರಕರಣಗಳು, ಬಾಲ್ಯವಿವಾಹ ಹಾಗೂ ಮಕ್ಕಳ ಹಕ್ಕುಗಳ ಉಲ್ಲಂಘನೆ ತಡೆಯಲು ಸಮಾಜದಲ್ಲಿ ನಿರಂತರ ಜಾಗೃತಿ ಮೂಡಿಸುವುದು ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯ ಕರ್ತವ್ಯ” ಎಂದು ಶಾಸಕರು ಪ್ರತಿಪಾದಿಸಿದರು.






ಇದೇ ವೇಳೆ, ಸ್ಥಳೀಯರ ಹಲವು ದಶಕಗಳ ಬೇಡಿಕೆಯನ್ನು ಪರಿಗಣಿಸಿ ಸಿ.ಎಸ್. ಪುರಕ್ಕೆ ಕರ್ನಾಟಕ ಪಬ್ಲಿಕ್ ಶಾಲೆ (KPS) ಮಂಜೂರು ಮಾಡಿಸಲಾಗಿದೆ ಎಂದು ಶಾಸಕರು ಪ್ರಕಟಿಸಿದರು.
ಸಮಾವೇಶದ ಬಳಿಕ ಶಾಸಕರು ಪ್ರಜಾಸೇವಾ ಆಂದೋಲನಕ್ಕೆ ಆಗಮಿಸಿದ್ದ ನೂರಾರು ಗ್ರಾಮೀಣ ನಾಗರಿಕರ ಕುಂದುಕೊರತೆ ಹಾಗೂ ಅಹವಾಲುಗಳನ್ನು ಸ್ವೀಕರಿಸಿ, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ತಕ್ಷಣವೇ ಪರಿಹರಿಸುವಂತೆ ಸೂಚನೆ ನೀಡಿದರು.





ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯತ್ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
– ವರದಿ: ವಿ.ಜಿ. ವೃಷಭೇಂದ್ರ, ಕೂಡ್ಲಿಗಿ

More Stories
ಬೆಲೆ ಏರಿಕೆ, ಅವೈಜ್ಞಾನಿಕ ಕಾಮಗಾರಿ ಖಂಡಿಸಿ ಸಿಪಿಐ(ಎಂ) ಬೃಹತ್ ಪ್ರತಿಭಟನೆ
ಮೌಲಾನಾ ಅಬುಲ್ ಕಲಾಂ ಆಜಾದ್ ಜಯಂತಿ ಹಾಗೂ ರಾಷ್ಟ್ರೀಯ ಶಿಕ್ಷಣ ದಿನಾಚರಣೆ
ಕೂಡ್ಲಿಗಿ: ಭಾರಿ ಶಬ್ದದ ಪಟಾಕಿ ಬಳಕೆಗೆ ಬ್ರೇಕ್ ಹಾಕಿ; ಪ್ರಾಣಿ-ಪಕ್ಷಿ, ರೋಗಿಗಳ ಸಂಕಟಕ್ಕೆ ಸ್ಪಂದಿಸಲು ಆಗ್ರಹ