November 22, 2026

ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನಕ್ಕೆ ಚಾಲನೆ; ಎಲ್ಲರ ಸಹಕಾರದಿಂದ ಟಿಬಿ ನಿರ್ಮೂಲನೆ ಸಾಧ್ಯ – ಡಾ. ಭಾರತಿ ಹೊಸಮನಿ

ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯಕ್ರಮ; ಡಿ. 8ರವರೆಗೆ ಮನೆ ಮನೆ ಭೇಟಿ ನೀಡಿ ತಪಾಸಣೆ

ಶಿರಸಿ (ಉತ್ತರ ಕನ್ನಡ): “ಸಕ್ರಿಯವಾಗಿ ನಾವೆಲ್ಲರೂ ಪಾಲ್ಗೊಂಡಾಗ ಮಾತ್ರ ಕ್ಷಯರೋಗವನ್ನು (ಟಿಬಿ) ಬುಡಸಮೇತ ನಿರ್ಮೂಲನೆ ಮಾಡಲು ಸಾಧ್ಯ. ರೋಗವನ್ನು ಶೀಘ್ರವಾಗಿ ಪತ್ತೆಹಚ್ಚಿ, ಸೂಕ್ತ ಚಿಕಿತ್ಸೆ ನೀಡುವುದರಿಂದ ಇದನ್ನು ಸಂಪೂರ್ಣವಾಗಿ ಗುಣಪಡಿಸಬಹುದು” ಎಂದು ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭಾರತಿ ಹೊಸಮನಿ ಅಭಿಪ್ರಾಯಪಟ್ಟರು.

ಶಿರಸಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ, ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿಗಳ ಕಚೇರಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಕ್ಷಯರೋಗವು ಕೆಮ್ಮು ಹಾಗೂ ಕಫದ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಕಾಯಿಲೆಯಾಗಿದ್ದು, ಯಾವುದೇ ಶಂಕಿತ ಲಕ್ಷಣಗಳು ಕಂಡುಬಂದ ತಕ್ಷಣ ಪರೀಕ್ಷೆಗೊಳಗಾಗಿ ಚಿಕಿತ್ಸೆ ಪಡೆಯಬೇಕು. ಕ್ಷಯಮುಕ್ತ ಭಾರತ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಶಕ್ತಿಮೀರಿ ಶ್ರಮಿಸಬೇಕು” ಎಂದರು.

ಡಿಸೆಂಬರ್ 8ರವರೆಗೆ ಮನೆ ಮನೆ ಸಮೀಕ್ಷೆ: ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕ ಉದಯಶಂಕರ್, “ರಾಜ್ಯಾದ್ಯಂತ ಅಕ್ಟೋಬರ್ 27ರಿಂದ ಆರಂಭವಾಗಿರುವ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನವು ಡಿಸೆಂಬರ್ 8ರವರೆಗೆ ನಡೆಯಲಿದೆ. ತಾಲೂಕು ಆರೋಗ್ಯಾಧಿಕಾರಿ ಡಾ. ಮಧುಕರ ಪಾಟೀಲ್ ನೇತೃತ್ವದಲ್ಲಿ ಶಿರಸಿಯಲ್ಲೂ ಈ ಅಭಿಯಾನ ಮುಂದುವರಿದಿದ್ದು, ಆರೋಗ್ಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಕ್ಷಯರೋಗದ ಮಾಹಿತಿ ಸಂಗ್ರಹಿಸಿ, ಶಂಕಿತರಿಗೆ ತಪಾಸಣೆ ನಡೆಸಲಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು” ಎಂದು ತಿಳಿಸಿದರು.

ವಿಶೇಷವಾಗಿ ಮಧುಮೇಹ (ಸಕ್ಕರೆ ಕಾಯಿಲೆ), ಅಧಿಕ ರಕ್ತದೊತ್ತಡ (ಬಿಪಿ) ಇರುವವರು, ಎಚ್‌ಐವಿ ಸೋಂಕಿತರು, ಇತ್ತೀಚಿನ ವರ್ಷಗಳಲ್ಲಿ ಕ್ಷಯರೋಗಕ್ಕೆ ಚಿಕಿತ್ಸೆ ಪಡೆದವರು ಹಾಗೂ ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಬೇಗನೆ ಸೋಂಕಿಗೆ ತುತ್ತಾಗುವ ಸಾಧ್ಯತೆÉಯಿರುವುದರಿಂದ, ಅಂತಹವರು ತಪ್ಪದೆ ಕ್ಷಯರೋಗ ಪರೀಕ್ಷೆ ಮಾಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.

ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ನಾಗನಗೌಡ ಮಾತನಾಡಿ, “ಈ ಆಂದೋಲನವು ಟಿಬಿ ರೋಗವನ್ನು ಬೇರುಸಹಿತ ನಿರ್ನಾಮ ಮಾಡಲು ಸಿಗಿರುವ ಪ್ರಮುಖ ಅಸ್ತ್ರವಾಗಿದ್ದು, ಎಲ್ಲರೂ ಒಗ್ಗಟ್ಟಾಗಿ ಇದರ ವಿರುದ್ಧ ಹೋರಾಡಬೇಕಿದೆ” ಎಂದರು. ಸಭೆಯ ಬಳಿಕ ಆರೋಗ್ಯ ನಿರೀಕ್ಷಣಾಧಿಕಾರಿ ಕುಮಾರಿ ಚಂದನಾ ಅವರು ಸಮೀಕ್ಷೆ ನಡೆಸುವ ವಿಧಾನದ ಕುರಿತು ಸಿಬ್ಬಂದಿಗೆ ವಿವರವಾದ ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಆರೋಗ್ಯ ಸುರಕ್ಷತಾಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

About The Author

error: Content is protected !!