ಬಸಳೆಕೊಪ್ಪದಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್‌ನಿಂದ ಒಂದು ತಿಂಗಳ ಉಚಿತ ಹೊಲಿಗೆ ತರಬೇತಿ ಶಿಬಿರ ಉದ್ಘಾಟನೆ
ಶಿರಸಿ (ಉತ್ತರ ಕನ್ನಡ): “ಜನ ಸೇವೆ ಮಾಡುವಾಗ ಜನರ ಮೇಲೆ ಪ್ರೀತಿ ಇರಬೇಕು. ಆಗ ನಾವು ಮಾಡುವ ಸೇವೆ ಸಾರ್ಥಕವಾಗುತ್ತದೆ. ಮಹಿಳೆ ಮನಸ್ಸು ಮಾಡಿದರೆ ಯಾವುದೇ ಕೆಲಸವನ್ನಾದರೂ ಸಾಧಿಸುವ ಸಾಮರ್ಥ್ಯ ಹೊಂದಿದ್ದಾಳೆ” ಎಂದು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.

ತಾಲೂಕಿನ ಬಸಳೆಕೊಪ್ಪದಲ್ಲಿ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಒಂದು ತಿಂಗಳ ಉಚಿತ ಹೊಲಿಗೆ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಬಡತನ ಎಂಬ ರೋಗವನ್ನು ಗುಣಪಡಿಸುವುದು ಬಹಳ ಕಷ್ಟ. ನಾವು ಸ್ವಾವಲಂಬಿಯಾಗಿ ಬದುಕಲು ಹೊಲಿಗೆ ಉದ್ಯೋಗ ಬಹಳ ಉಪಕಾರಿಯಾಗಿದೆ. ಅಡುಗೆ ಮತ್ತು ಹೊಲಿಗೆಯು ಮಹಿಳೆಯರು ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಉತ್ತಮ ದಾರಿಯಾಗಿದೆ. ನನ್ನ ದುಡಿಮೆಯ ಕೆಲ ಭಾಗವನ್ನು ಜನಸೇವೆಗೆ ಮುಡಿಪಾಗಿಟ್ಟಿದ್ದು, ಮಹಿಳೆಯರು ಇದರ ಸದುಪಯೋಗ ಪಡೆದುಕೊಂಡು ಉತ್ತಮವಾಗಿ ಕಲಿಯಬೇಕು” ಎಂದರು.


ಮಹಿಳಾ ಸಬಲೀಕರಣಕ್ಕೆ ಟ್ರಸ್ಟ್ ಸೇವೆ ಶ್ಲಾಘನೆ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದೊಡ್ನಳ್ಳಿ ಪಂಚಾಯಿತಿ ಪಿಡಿಒ ಪ್ರೀತಿ ಶೆಟ್ಟಿ ಮಾತನಾಡಿ, “ಮಹಿಳೆಯರಿಗೆ ಸ್ವ ಉದ್ಯೋಗ ಕಲಿಸುವ ನಿಟ್ಟಿನಲ್ಲಿ ಟ್ರಸ್ಟ್ ಉತ್ತಮ ಕಾರ್ಯ ಮಾಡುತ್ತಿದೆ. ಇಂದಿನ ದಿನಗಳಲ್ಲಿ ಕುಟುಂಬ ನಿರ್ವಹಣೆಗೆ ಮಹಿಳೆಯರ ಆರ್ಥಿಕ ನೆರವು ಅನಿವಾರ್ಯವಾಗಿದ್ದು, ಅನಂತಮೂರ್ತಿ ಹೆಗಡೆಯವರು ಸರ್ಕಾರ ಮಾಡುವಷ್ಟು ಜನೋಪಯೋಗಿ ಕೆಲಸ ಮಾಡುತ್ತಿದ್ದಾರೆ” ಎಂದು ಪ್ರಶಂಸಿಸಿದರು.
ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, “ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದರೆ ಕುಟುಂಬ ಉತ್ತಮವಾಗಿರುತ್ತದೆ. ತಾನು ಬೆಳೆಯುವುದರ ಜೊತೆಗೆ ಇನ್ನೊಬ್ಬರನ್ನು ಬೆಳೆಸುವ ಮನಸ್ಥಿತಿ ರೂಢಿಸಿಕೊಳ್ಳಬೇಕು” ಎಂದರು. ಗ್ರಾ.ಪಂ. ಮಾಜಿ ಸದಸ್ಯೆ ವನಜಾಕ್ಷಿ ಗೌಡ ಮಾತನಾಡಿ, “ಶಿರಸಿಯಲ್ಲಿ ಗಾರ್ಮೆಂಟ್ಸ್ ತಲೆಎತ್ತುತ್ತಿದ್ದು, ಇಲ್ಲಿನ ಮಹಿಳೆಯರು ಹೊಲಿಗೆ ಕಲಿತು ತಮ್ಮೂರಿನಲ್ಲೇ ಗಾರ್ಮೆಂಟ್ಸ್ ಆರಂಭಿಸಲು ಮುಂದಾಗಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ರಾಮಾ ಆರೇರ, ರವಿ ಆರೇರ, ಮಾಬ್ಲೇಶ್ವರ ಭಂಡಾರಿ, ಚನ್ನಪ್ಪ, ಸದಾನಂದ ಆರೇರ, ಕಿರಣ್ ಆಚಾರಿ, ಚೇತನಾ ಹಾಗೂ ಅನಂತಮೂರ್ತಿ ಹೆಗಡೆ ಅವರ ಪಾಲಕರಾದ ಮಾಬ್ಲೇಶ್ವರ ಹೆಗಡೆ ಮತ್ತು ಶಾರದಾ ಹೆಗಡೆ ಉಪಸ್ಥಿತರಿದ್ದರು. ಶೀಲಾ ಹೆಬ್ಬಾರ್ ಹಾಗೂ ಚಂದ್ರಶೇಖರ್ ಕಾರ್ಯಕ್ರಮ ನಿರ್ವಹಿಸಿದರು.
ಪ್ರಶಂಸೆಗೆ ಪಾತ್ರವಾದ ಉಚಿತ ಹೊಲಿಗೆ ತರಬೇತಿ ಶಿಬಿರ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಉಚಿತ್ ಹೊಲಿಗೆ ತರಬೇತಿ ಶಿಬಿರವು ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡು ತರಬೇತಿ ಪಡೆಯುತ್ತಿದ್ದಾರೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ಇತರೆ ಗ್ರಾಮಗಳಲ್ಲೂ ಇಂತಹದೇ ಶಿಬಿರಗಳನ್ನು ನಡೆಸುವಂತೆ ಟ್ರಸ್ಟ್‌ಗೆ ಮನವಿಗಳು ಬರುತ್ತಿರುವುದು ವಿಶೇಷವಾಗಿದೆ.

More Stories
ಮಣಿಪುರದಲ್ಲಿ ಕರ್ತವ್ಯದ ವೇಳೆ ಮೃತಪಟ್ಟ ಯೋಧ ಗಿರೀಶ ನಾಯ್ಕ ಮನೆಗೆ ಬಿಜೆಪಿ ಮುಖಂಡರ ಭೇಟಿ, ಸಾಂತ್ವನ
ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನಕ್ಕೆ ಚಾಲನೆ; ಎಲ್ಲರ ಸಹಕಾರದಿಂದ ಟಿಬಿ ನಿರ್ಮೂಲನೆ ಸಾಧ್ಯ – ಡಾ. ಭಾರತಿ ಹೊಸಮನಿ
ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ ವಾರ್ಷಿಕ ಪ್ರಶಸ್ತಿ ಪ್ರಕಟ: ಹೆಚ್.ಆರ್. ಶ್ರೀಶ, ಜಿ.ಯು. ಭಟ್ ಸೇರಿ ನಾಲ್ವರಿಗೆ ಗೌರವ