ಪಟ್ಟಣದ ನಂಬರ್-2 ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ; ಮಕ್ಕಳಿಗೆ ಪುಸ್ತಕ ವಿತರಿಸಿ ಉದ್ಘಾಟನೆ
ಹೊನ್ನಾವರ/ಉತ್ತರ ಕನ್ನಡ: “ಇಂದಿನ ಮಕ್ಕಳೇ ನಾಳಿನ ದೇಶದ ಆಸ್ತಿಯಾಗಿದ್ದು, ಪ್ರತಿಯೊಬ್ಬ ಮಗುವೂ ಸ್ವಂತ ಪರಿಶ್ರಮದಿಂದ ಏನನ್ನಾದರೂ ಸಾಧಿಸಬಲ್ಲದು. ಆದರೆ ಅವರ ಆಯ್ಕೆ ಸಮಾಜ ಮೆಚ್ಚುವ ಹಾಗೂ ಒಪ್ಪುವಂತಿರಬೇಕು. ಅವರ ಮಾದರಿ ವ್ಯಕ್ತಿತ್ವವೇ ಸಮಾಜದಲ್ಲಿ ಅವರನ್ನು ಶಾಶ್ವತವಾಗಿ ನೆನಪಿನಲ್ಲಿಡುವಂತೆ ಮಾಡುತ್ತದೆ” ಎಂದು ಶಿಕ್ಷಕ ಪಿ.ಆರ್. ನಾಯ್ಕ ಅಭಿಪ್ರಾಯಪಟ್ಟರು.

ಪಟ್ಟಣದ ನಂಬರ್-2 ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ‘ಮಕ್ಕಳ ದಿನಾಚರಣೆ’ ಕಾರ್ಯಕ್ರಮವನ್ನು ಮಕ್ಕಳಿಗೆ ಪುಸ್ತಕಗಳನ್ನು ವಿತರಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. “ಪ್ರತಿಯೊಂದು ಮಗುವಿನಲ್ಲೂ ವಿಶೇಷವಾದ ಸುಪ್ತ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಸರಿಯಾದ ಗುರಿಯೆಡೆಗೆ ಮುನ್ನಡೆಸಿದಾಗ ಮಾತ್ರ ಯಶಸ್ಸು ಸಾಧ್ಯ. ಬಾಲ್ಯದಿಂದಲೇ ಆಸಕ್ತಿ, ಸೋತರೂ ಗೆಲುವೇ ಬದುಕಿನ ದಾರಿ ಎಂಬ ಆತ್ಮವಿಶ್ವಾಸ, ಶ್ರದ್ಧೆ ಹಾಗೂ ಸತತ ಪರಿಶ್ರಮವನ್ನು ಮೈಗೂಡಿಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.

“ಬದುಕಿನ ಅನುಭವದ ಪಾಠವೇ ವ್ಯಕ್ತಿಯ ನಿಜವಾದ ವ್ಯಕ್ತಿತ್ವವನ್ನು ರೂಪಿಸುತ್ತದೆ. ಹಿಂದೆ ಸಾಧನೆ ಮಾಡಿದ ಮಹಾನುಭಾವರ ಜೀವನ ಚರಿತ್ರೆಗಳನ್ನು ಅಧ್ಯಯನ ಮಾಡಿ, ಅವರ ಆದರ್ಶಗಳ ಹಾದಿಯಲ್ಲಿ ಸಾಗಿದರೆ ಯಶಸ್ಸು ಖಂಡಿತ ಲಭಿಸುತ್ತದೆ” ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಕ್ರಿಯಾಶೀಲ ಶಿಕ್ಷಕಿ ಸಂಧ್ಯಾ ಹೆಗಡೆ ಸ್ವಾಗತಿಸಿದರು. ಶಿಕ್ಷಕಿ ಮಾಲಿನಿ ಮೇಸ್ತ ವಂದನಾರ್ಪಣೆ ನೆರವೇರಿಸಿದರೆ, ಅಡುಗೆ ಸಹಾಯಕಿ ಶೀಲಾ ಮೇಸ್ತ ಕಾರ್ಯಕ್ರಮವನ್ನು ಸಂಘಟಿಸಿ ಸಹಕರಿಸಿದರು.

More Stories
ಮಾಜಿ ಸೈನಿಕ, ನಾಮಧಾರಿ ಸಮಾಜದ ಹಿರಿಯ ಮುಖಂಡ ವಾಮನ ನಾಯ್ಕ ಮಂಕಿ ನಿಧನ
ಹೊನ್ನಾವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ಗೆ ಜಿಲ್ಲೆಯ ‘ಉತ್ತಮ ಅರ್ಬನ್ ಬ್ಯಾಂಕ್’ ಪ್ರಶಸ್ತಿ
ಹೊನ್ನಾವರ: ಕೋಟೆಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜೃಂಭಣೆಯ ‘ಮಕ್ಕಳ ಹಬ್ಬ’