November 22, 2026

ಭಟ್ಕಳ: ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳು, ದಾನಿಗಳ ಸಹಕಾರ ಅತ್ಯಗತ್ಯ – ರಾಜೇಶ ನಾಯಕ

ದಿ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ನೂತನ ಕಟ್ಟಡ ನಿರ್ಮಾಣಕ್ಕೆ ಕೊಂಕಣ ಖಾರ್ವಿ ಸಮಾಜದಿಂದ ₹10 ಲಕ್ಷ ದೇಣಿಗೆ ಹಸ್ತಾಂತರ

ಭಟ್ಕಳ (ಉತ್ತರ ಕನ್ನಡ): “ಖಾಸಗಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ಮೂಲ ಸೌಕರ್ಯ ಅಭಿವೃದ್ಧಿ, ಶೈಕ್ಷಣಿಕ ಗುಣಮಟ್ಟದ ಸುಧಾರಣೆ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವಲ್ಲಿ ಹಳೆ ವಿದ್ಯಾರ್ಥಿಗಳು, ಹಿತೈಷಿಗಳು ಹಾಗೂ ಸಮಾಜದ ದಾನಿಗಳ ಸಹಕಾರ ಅತ್ಯಂತ ಅವಶ್ಯಕವಾಗಿದೆ” ಎಂದು ಭಟ್ಕಳ ಎಜುಕೇಶನ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ರಾಜೇಶ ನಾಯಕ ಅಭಿಪ್ರಾಯಪಟ್ಟರು.

ಭಟ್ಕಳ ಕೊಂಕಣ ಖಾರ್ವಿ ಸಮಾಜದ ವತಿಯಿಂದ ನೀಡಲಾದ 10,00,000 ರೂಪಾಯಿಗಳ ದೇಣಿಗೆ ಚೆಕ್ ಅನ್ನು ಸ್ವೀಕರಿಸಿ ಅವರು ಮಾತನಾಡಿದರು. “ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲಿಷ್ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಿದಾಗ, ಭಟ್ಕಳದ ಎಲ್ಲಾ ಸಮಾಜದ ಹಳೆ ವಿದ್ಯಾರ್ಥಿಗಳಲ್ಲಿ ಸಹಕಾರಕ್ಕಾಗಿ ವಿನಂತಿಸಲಾಗಿತ್ತು. ಇದಕ್ಕೆ ತಕ್ಷಣ ಸ್ಪಂದಿಸಿ ಕೊಂಕಣ ಖಾರ್ವಿ ಸಮಾಜವು ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಭಟ್ಕಳ ಕೊಂಕಣ ಖಾರ್ವಿ ಸಮಾಜದ ಅಧ್ಯಕ್ಷರಾದ ಸುಬ್ರಾಯ ಭಿಕ್ಕು ಖಾರ್ವಿ ಅವರನ್ನು ಶಿಕ್ಷಣ ಸಂಸ್ಥೆಯ ಪರವಾಗಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಕೊಂಕಣ ಖಾರ್ವಿ ಸಮಾಜದ ಉಪಾಧ್ಯಕ್ಷ ಕೇಶವ ಖಾರ್ವಿ, ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ಖಾರ್ವಿ, ಸದಸ್ಯರಾದ ಎನ್.ಡಿ. ಖಾರ್ವಿ, ಶ್ರೀನಿವಾಸ ಖಾರ್ವಿ, ರಾಮದಾಸ ಖಾರ್ವಿ, ಜನಾರ್ಧನ ಖಾರ್ವಿ, ರಾಮಕೃಷ್ಣ ಖಾರ್ವಿ ಹಾಗೂ ತಿಮ್ಮಪ್ಪ ಖಾರ್ವಿ ಉಪಸ್ಥಿತರಿದ್ದರು.

ಭಟ್ಕಳ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿ ಮ್ಯಾನೇಜರ್ ನಾಗೇಶ ಭಟ್ಟ, ಟ್ರಸ್ಟಿಗಳಾದ ಶ್ರೀಧರ ಶ್ಯಾನುಭಾಗ, ರಮೇಶ ಖಾರ್ವಿ, ಅನಿಲ ನಾಯಕ, ಗುರುದತ್ ಶೇಟ್ ಮತ್ತು ಕಾಲೇಜಿನ ಪ್ರಾಂಶುಪಾಲ ಡಾ. ವೀರೇಂದ್ರ ವಿ. ಶ್ಯಾನುಭಾಗ ಹಾಜರಿದ್ದರು.

About The Author

error: Content is protected !!