November 24, 2026

ಫ್ರೀಡಂ ಪಾರ್ಕ್‌ನಲ್ಲಿ 8ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಧರಣಿ

ಮಾಸಿಕ ₹15,000 ನಿಗದಿತ ಗೌರವಧನ ಹಾಗೂ ನಿವೃತ್ತಿ ಪರಿಹಾರಕ್ಕೆ ಆಗ್ರಹ; ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ನೈತಿಕ ಬೆಂಬಲ ಸೂಚಿಸಿದ ಬಿಜೆಪಿ ನಾಯಕ ಈಶ್ವರ ನಾಯ್ಕ

ಬೆಂಗಳೂರು: ಮಾಸಿಕ ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯು ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟ ತೀವ್ರಗೊಂಡಿದೆ. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈಶ್ವರ ನಾಯ್ಕ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಕರ್ತೆಯರ ನ್ಯಾಯಸಮ್ಮತ ಹೋರಾಟಕ್ಕೆ ಬೆಂಬಲ ಸೂಚಿಸಿ ನೈತಿಕ ಸ್ಥೈರ್ಯ ತುಂಬಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಸಮುದಾಯ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ನಡುವೆ ಪ್ರಮುಖ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ತಾಯಿ ಮತ್ತು ಮಗುವಿನ ಆರೋಗ್ಯ, ಲಸಿಕೆ ವಿತರಣೆ, ಕುಟುಂಬ ಕಲ್ಯಾಣ ಹಾಗೂ ಪ್ರಾಥಮಿಕ ಆರೋಗ್ಯ ಜಾಗೃತಿ ಮೂಡಿಸುವಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಕೋವಿಡ್-19ನಂತಹ ಸಂಕಷ್ಟದ ಸಂದರ್ಭದಲ್ಲಿಯೂ ಜೀವದ ಹಂಗು ತೊರೆದು ಅವರು ನಿರ್ವಹಿಸಿದ ಜವಾಬ್ದಾರಿ ಅಮೂಲ್ಯವಾದುದು.

ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಈಶ್ವರ ನಾಯ್ಕ ಖಂಡನೆ: ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರ ನಾಯ್ಕ, “ಸರ್ಕಾರದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ಮನೆಗೂ ತಲುಪಿಸುವ ಮಹತ್ತರ ಕಾರ್ಯ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸತ್ಯಾಗ್ರಹ ಕೈಗೊಂಡಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ಪ್ರದರ್ಶಿಸುತ್ತಿರುವುದು ತೀವ್ರ ಖಂಡನೀಯ. ಮಾಸಿಕ ₹15,000 ನಿಗದಿತ ಗೌರವಧನ ಮತ್ತು ನಿವೃತ್ತಿ ಪರಿಹಾರಕ್ಕೆ ಆಗ್ರಹಿಸಿ ಕಾರ್ಯಕರ್ತೆಯರು ಬಿಸಿಲು, ಚಳಿಯೆನ್ನದೆ ಅಹೋರಾತ್ರಿ ಧರಣಿ ನಡೆಸಿ ಎಂಟು ದಿನಗಳು ಕಳೆದರೂ ಸರ್ಕಾರ ಗಾಢನಿದ್ರೆಯಿಂದ ಎಚ್ಚರಗೊಳ್ಳುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಆಶಾ ಕಾರ್ಯಕರ್ತೆಯರನ್ನು ‘ಸಹೋದರಿಯರು’ ಎಂದು ಕರೆಯುತ್ತಾ ಬೂಟಾಟಿಕೆ ಪ್ರದರ್ಶಿಸುವ ಮುಖ್ಯಮಂತ್ರಿಗಳು, ಅವರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸದೆ ಕಾಲಹರಣ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ನಿತ್ಯಬಳಕೆಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದರಿಂದ ಶ್ರಮಿಕ ವರ್ಗದ ಜೀವನ ದುಸ್ತರವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳದ ಬೇಡಿಕೆಗೆ ಸ್ಪಂದಿಸಬೇಕು” ಎಂದು ಈಶ್ವರ ನಾಯ್ಕ ಆಗ್ರಹಿಸಿದ್ದಾರೆ.

About The Author

error: Content is protected !!