November 22, 2026

ಕಲಬುರಗಿಯಲ್ಲಿ ‘ಕೆಎಸ್‌ಐಎಸ್‌ಎಫ್’ ಹೊಸ ಬೆಟಾಲಿಯನ್ ಸ್ಥಾಪನೆಗೆ ಪ್ರಸ್ತಾವನೆ; 1,170 ಹುದ್ದೆಗಳ ಸೃಜನೆ ನಿರೀಕ್ಷೆ

ಕಲ್ಯಾಣ ಕರ್ನಾಟಕ ಭಾಗದ ಕೈಗಾರಿಕಾ ಭದ್ರತೆಗೆ ಬಲ; ಡಿಜಿ-ಐಜಿಪಿಗೆ ವರದಿ ಸಲ್ಲಿಸಿದ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಬಿ. ದಯಾನಂದ

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿ, ಕೈಗಾರಿಕಾ ಭದ್ರತೆಯ ಬಲವರ್ಧನೆ ಹಾಗೂ ಪೊಲೀಸ್ ಇಲಾಖೆಯ ಆಡಳಿತಾತ್ಮಕ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ (KSISF) ಹೊಸ ಬೆಟಾಲಿಯನ್ ಸ್ಥಾಪಿಸಲು ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದ (ISD) ಮಹಾನಿರ್ದೇಶಕ ಬಿ. ದಯಾನಂದ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿ ಮತ್ತು ಐಜಿಪಿ) ಅಧಿಕೃತ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಅವರು ಸಲ್ಲಿಸಿದ್ದ ಮನವಿಯನ್ನು ಪರಿಶೀಲಿಸಿದ ಬಳಿಕ ಈ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಕಲ್ಯಾಣ ಕರ್ನಾಟಕ ವಲಯದ ವಿವಿಧ ಜಿಲ್ಲೆಗಳ ಸೂಕ್ಷ್ಮ ಸ್ಥಾವರಗಳಿಗೆ ಸಮರ್ಪಕ ಭದ್ರತೆ ಒದಗಿಸಲು ಕಲಬುರಗಿಯಲ್ಲಿ ಪ್ರತ್ಯೇಕ ಬೆಟಾಲಿಯನ್ ಅತ್ಯಗತ್ಯವಾಗಿದೆ ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.

ಉಸ್ತುವಾರಿ ಅಂತರದ ಸಮಸ್ಯೆಗೆ ಪರಿಹಾರ: ರಾಜ್ಯದ ಪ್ರಮುಖ ಸ್ಥಾವರಗಳ ಭದ್ರತೆಗಾಗಿ 2011ರಲ್ಲಿ 1, 2 ಮತ್ತು 3ನೇ ಪಡೆಗಳು ಹಾಗೂ 2025ರಲ್ಲಿ 4ನೇ ಕೆಎಸ್‌ಐಎಸ್‌ಎಫ್ ಪಡೆಗಳನ್ನು ಸೃಜಿಸಲಾಗಿದ್ದು, ಪ್ರಸ್ತುತ ಬೆಂಗಳೂರು, ಶಿವಮೊಗ್ಗ, ಧಾರವಾಡ ಹಾಗೂ ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದುವರೆಗೆ ಕಲ್ಯಾಣ ಕರ್ನಾಟಕ ಭಾಗದ ಭದ್ರತಾ ಉಸ್ತುವಾರಿಯನ್ನು ಸುಮಾರು 245 ಕಿ.ಮೀ. ದೂರದ ಶಿವಮೊಗ್ಗ (2ನೇ ಪಡೆ) ಹಾಗೂ 350 ಕಿ.ಮೀ. ದೂರದ ಧಾರವಾಡ (3ನೇ ಪಡೆ) ಬೆಟಾಲಿಯನ್‌ಗಳಿಂದ ನಿರ್ವಹಿಸಲಾಗುತ್ತಿತ್ತು. ದೂರದ ಕಾರಣದಿಂದ ಆಡಳಿತಾತ್ಮಕ ನಿರ್ವಹಣೆ ಮತ್ತು ಸಿಬ್ಬಂದಿಯ ಕರ್ತವ್ಯದ ಮೇಲೆ ಪರಿಣಾಮಕಾರಿ ನಿಗಾ ಇರಿಸಲು ಹಿರಿಯ ಅಧಿಕಾರಿಗಳಿಗೆ ತೊಂದರೆಯಾಗುತ್ತಿತ್ತು.

1,170 ಹುದ್ದೆಗಳ ಪ್ರಸ್ತಾಪ – ಆರ್ಥಿಕ ಅಂದಾಜು: ನೂತನ ಬೆಟಾಲಿಯನ್‌ಗಾಗಿ ಕಮಾಂಡೆಂಟ್, ಸಹಾಯಕ ಕಮಾಂಡೆಂಟ್, ಇನ್ಸ್‌ಪೆಕ್ಟರ್, ಪಿಎಸ್‌ಐ ಹಾಗೂ ಕಾನ್‌ಸ್ಟೇಬಲ್‌ಗಳು ಸೇರಿದಂತೆ ಒಟ್ಟು 1,170 ಹುದ್ದೆಗಳ ಸಿಬ್ಬಂದಿ ಬಲವನ್ನು ಪ್ರಸ್ತಾಪಿಸಲಾಗಿದೆ. ಆರ್ಥಿಕ ಇಲಾಖೆಗೆ ಸಲ್ಲಿಸಿರುವ ಅಂದಾಜಿನ ಪ್ರಕಾರ, ಹೊಸ ಬೆಟಾಲಿಯನ್ ಸ್ಥಾಪನೆಗೆ ವಾರ್ಷಿಕ ಆವರ್ತಕ ವೆಚ್ಚ ₹81,61,49,772 ಹಾಗೂ ಅನಾವರ್ತಕ ವೆಚ್ಚ ₹19,01,40,000 ತಗುಲಲಿದೆ ಎಂದು ಅಂದಾಜಿಸಲಾಗಿದೆ.

ಕಲ್ಯಾಣ ಕರ್ನಾಟಕಕ್ಕೆ ಆಗುವ ಪ್ರಯೋಜನಗಳು:

ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಪ್ರಮುಖ ಕೈಗಾರಿಕೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ಸ್ಥಳೀಯವಾಗಿಯೇ ಬಿಗಿ ಭದ್ರತೆ ದೊರೆಯಲಿದೆ.

ಈ ಭಾಗದ ಯುವಜನತೆಗೆ ಪೊಲೀಸ್ ಇಲಾಖೆಯಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

    ಪ್ರಸ್ತುತ ಇಲಾಖಾ ಮಟ್ಟದಲ್ಲಿ ಸಲ್ಲಿಕೆಯಾಗಿರುವ ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರದ ಸಚಿವ ಸಂಪುಟದ ಅನುಮೋದನೆ ದೊರೆತ ಬಳಿಕ ಅಧಿಕೃತ ಆದೇಶ ಹಾಗೂ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ.

    About The Author

    error: Content is protected !!