November 23, 2026

ಹಿರಿಯ ಪತ್ರಕರ್ತ ಜಿ.ಯು. ಭಟ್ಟರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮವಾಗಬೇಕು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ೭೧ ಮಂದಿ ಸಾಧಕರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಿದರು.

ಮಾಧ್ಯಮ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಸುದೀರ್ಘ ಕೊಡುಗೆ ನೀಡಿದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹಿರಿಯ ಪತ್ರಕರ್ತ ಜಿ.ಯು. ಭಟ್ ಅವರಿಗೆ ಮುಖ್ಯಮಂತ್ರಿಗಳು ಪದಕ ಹಾಗೂ ಸಂಮಾನ ಫಲಕ ನೀಡಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದರು.

ಕನ್ನಡ ಜನರ ಬದುಕಿನ ಭಾಷೆಯಾಗಲಿ: ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಕರ್ನಾಟಕದಲ್ಲಿ ಅನ್ಯ ಭಾಷೆಗಳು ಅತಿಥಿಯಾಗಿ ಇರಬೇಕು, ಕನ್ನಡವೇ ಅಧಿಪತಿಯಾಗಬೇಕು. ಕನ್ನಡವನ್ನು ಪ್ರೀತಿಸುವುದು ಎಂದರೆ ಬೇರೆ ಭಾಷೆಯನ್ನು ದ್ವೇಷಿಸುವುದಲ್ಲ. ಕಚೇರಿ, ವ್ಯಾಪಾರ ಹಾಗೂ ಸಾರ್ವಜನಿಕ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಕನ್ನಡ ಸಹಜವಾಗಿ ಬಳಕೆಯಾಗಬೇಕು. ರಾಜ್ಯದಲ್ಲಿ ಕನ್ನಡ ಸಾರ್ವಭೌಮ ಹಾಗೂ ಜನರ ಬದುಕಿನ ಭಾಷೆಯಾಗಬೇಕು” ಎಂದರು.

ಕನ್ನಡ ಕಡೆಗಣಿಸಿದರೆ ಕಾನೂನು ಕ್ರಮ: ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, “ರಾಜ್ಯದಲ್ಲಿರುವ ಐಟಿ ಕಂಪನಿಗಳು ಹಾಗೂ ಕೈಗಾರಿಕಾ ಸಂಸ್ಥೆಗಳು ಕನ್ನಡ ಭಾಷೆಗೆ ಸೂಕ್ತ ಆದ್ಯತೆ ನೀಡಬೇಕು. ಒಂದು ವೇಳೆ ಕನ್ನಡವನ್ನು ಕಡೆಗಣಿಸಿದರೆ ಸರ್ಕಾರದ ವತಿಯಿಂದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಸಮಾರಂಭದಲ್ಲಿ ವಿಧಾನಸಭೆಯ ಅಧ್ಯಕ್ಷ ಜಿ.ಎಸ್. ಪಾಟೀಲ್, ವಿಧಾನ ಪರಿಷತ್ತಿನ ಸಭಾಪತಿ ಸಲೀಂ ಅಹ್ಮದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಮಂಜುಶ್ರೀ ಎನ್., ನಿರ್ದೇಶಕಿ ಕೆ.ಎಂ. ವಸುಂಧರಾ ಸೇರಿದಂತೆ ಹಲವು ಗಣ್ಯರು ಹಾಗೂ ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.

About The Author

error: Content is protected !!