November 26, 2026

ಮಕ್ಕಳ ಸುಪ್ತ ಪ್ರತಿಭೆ ಅನಾವರಣಕ್ಕೆ ‘ಪ್ರತಿಭಾ ಕಾರಂಜಿ’ ಸೂಕ್ತ ವೇದಿಕೆ – ಬಿಇಒ ಬಿ.ಎಸ್. ಭಜಂತ್ರಿ

ಹೋಲಿ ರೋಜರಿ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸಂಭ್ರಮ; ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಉಷಾ ನಾಯಕ್ ಅವರಿಗೆ ಸನ್ಮಾನ

ಹೊನ್ನಾವರ (ಉತ್ತರ ಕನ್ನಡ): ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಅನಾವರಣಗೊಳಿಸಲು ‘ಪ್ರತಿಭಾ ಕಾರಂಜಿ’ ಅತ್ಯಂತ ಸೂಕ್ತ ವೇದಿಕೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಬಿ.ಎಸ್. ಭಜಂತ್ರಿ ಅಭಿಪ್ರಾಯಪಟ್ಟರು.

ಪಟ್ಟಣದ ಹೋಲಿ ರೋಜರಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಹೊನ್ನಾವರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಯಾವುದೇ ಪ್ರತಿಭೆಯ ಯಶಸ್ಸಿನಲ್ಲಿ ವಿದ್ಯಾರ್ಥಿಗಳ ಪರಿಶ್ರಮದ ಪಾಲು ದೊಡ್ಡದಿರುತ್ತದೆ. ಇಂತಹ ಸಾಂಸ್ಕೃತಿಕ ವೇದಿಕೆಗಳನ್ನು ಸದ್ಬಳಕೆ ಮಾಡಿಕೊಂಡಾಗ ಮಾತ್ರ ನಿಮ್ಮ ಪ್ರತಿಭೆ ಸಮಾಜಕ್ಕೆ ಪರಿಚಯವಾಗಲು ಸಾಧ್ಯ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ ಮಾತನಾಡಿ, “ವಿದ್ಯಾರ್ಥಿಗಳ ನಿರಂತರ ಪರಿಶ್ರಮ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಇಂತಹ ವೇದಿಕೆಗಳು ಪ್ರೋತ್ಸಾಹ ನೀಡುವ ಮೂಲಕ ಅವರ ಪ್ರತಿಭೆ ಮತ್ತಷ್ಟು ಬೆಳಗಲು ಸಹಕಾರಿಯಾಗುತ್ತವೆ” ಎಂದು ಹೇಳಿದರು.

ಪ್ರತಿ ಮಗುವಿನಲ್ಲೂ ವಿಶೇಷ ಪ್ರತಿಭೆ: ಕ್ಷೇತ್ರ ಸಮನ್ವಯಾಧಿಕಾರಿ (ಬಿಆರ್‌ಸಿ) ಜಯಶ್ರೀ ನಾಯ್ಕ ಮಾತನಾಡಿ, “ಪ್ರತಿಯೊಂದು ಮಗುವಿನಲ್ಲೂ ಒಂದೊಂದು ವಿಶಿಷ್ಟ ಪ್ರತಿಭೆ ಅಡಗಿರುತ್ತದೆ. ಅಂತಹ ಪ್ರತಿಭೆಗಳು ಸೂಕ್ತ ವೇದಿಕೆಯ ಮೂಲಕ ಹೊರಹೊಮ್ಮಲು ಪ್ರತಿಭಾ ಕಾರಂಜಿ ಉತ್ತಮ ಅವಕಾಶವಾಗಿದೆ” ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುದೀಶ ನಾಯ್ಕ ಮಾತನಾಡಿ, “ಹೊನ್ನಾವರದ ನೆಲದ ಅನೇಕ ಪ್ರತಿಭೆಗಳು ಈಗಾಗಲೇ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಿಂಚಿವೆ. ವ್ಯಕ್ತಿತ್ವ ವಿಕಸನದ ಜೊತೆಗೆ ಈ ಭಾಗದ ಇನ್ನಷ್ಟು ಪ್ರತಿಭೆಗಳು ನಾಡಿನಾದ್ಯಂತ ಬೆಳಗಲಿ” ಎಂದು ಶುಭ ಹಾರೈಸಿದರು.

ಶಿಕ್ಷಕಿ ಉಷಾ ನಾಯಕ್ ಅವರಿಗೆ ಸನ್ಮಾನ: ಇದೇ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಉಷಾ ನಾಯಕ್ ಅವರನ್ನು ಕ್ಲಸ್ಟರ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಜಿಲ್ಲಾ ಶಿಕ್ಷಕರ ಸಂಘದ ಲಕ್ಷ್ಮಿ ಎಚ್., ರಾಜ್ಯ ಸಂಘದ ಉದಯ ನಾಯ್ಕ, ತಾಲೂಕು ಶಿಕ್ಷಕರ ಸಂಘದ ಶಿಲ್ಪ ಭಂಡಾರಿ, ಶಂಕರ ನಾಯ್ಕ, ಶಾಲೆಯ ಮುಖ್ಯಾಧ್ಯಾಪಕ ಜೇವಿಯರ್ ರೊಡ್ರಿಗಸ್ ಹಾಗೂ ಉಷಾ ನಾಯಕ್ ಉಪಸ್ಥಿತರಿದ್ದರು. ಸಮೂಹ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ) ಪ್ರಕಾಶ ಶೇಟ್ ಸ್ವಾಗತಿಸಿದರೆ, ಶಿಕ್ಷಕ ಪಿ.ಆರ್. ನಾಯ್ಕ ವಂದಿಸಿದರು.

About The Author

error: Content is protected !!