November 26, 2026

ಪಶ್ಚಿಮಘಟ್ಟದ ನೈಜ ಸೂಕ್ಷ್ಮ ಪ್ರದೇಶಗಳಲ್ಲಿ ಬ್ರಹತ್ ಯೋಜನೆಗಳಿಗೆ ನಿಷೇಧ ಹೇರಲಿ: ಚಂದ್ರಕಾಂತ ಕೊಚರೇಕರ

ಜನವಸತಿ, ಕೃಷಿ ಭೂಮಿ ಇಎಸ್‌ಎ ವ್ಯಾಪ್ತಿಯಿಂದ ಹೊರಗಿಡಲು ಆಗ್ರಹ; ಜಸ್ಟೀಸ್ ಡಿ. ಕುನ್ಹಾ ಅಧ್ಯಯನ ಸಮಿತಿಗೆ ಲಿಖಿತ ಅಹವಾಲು ಸಲ್ಲಿಕೆ

ಉತ್ತರ ಕನ್ನಡ: ಭೌತಿಕ ಸಮೀಕ್ಷೆ ಮತ್ತು ಅಗತ್ಯ ಅಧ್ಯಯನ ನಡೆಸುವ ಮೂಲಕ ಜನವಸತಿ ಹಾಗೂ ಸಾಗುವಳಿ ಪ್ರದೇಶಗಳನ್ನು ಹೊರತುಪಡಿಸಿ, ಆಣೆಕಟ್ಟುಗಳಿರುವ ಮತ್ತು ಭೂಕುಸಿತ ವಲಯದ ನೈಜ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ (ESA) ಪಶ್ಚಿಮಘಟ್ಟದೊಳಗೆ ಬ್ರಹತ್ ಯೋಜನೆಗಳನ್ನು ಅನುಷ್ಠಾನಗೊಳಿಸದಂತೆ ಸರ್ಕಾರ ಸಂಪೂರ್ಣ ನಿಷೇಧ ಹೇರಬೇಕು ಎಂದು ಸಾಮಾಜಿಕ ಹೋರಾಟಗಾರ ಹಾಗೂ ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಪ್ರತಿಪಾದಿಸಿದ್ದಾರೆ.

ಈ ಸಂಬಂಧ ರಾಜ್ಯ ಸರ್ಕಾರ ನೇಮಕ ಮಾಡಿರುವ ನ್ಯಾಯಮೂರ್ತಿ ಜಸ್ಟೀಸ್ ಡಿ. ಕುನ್ಹಾ ನೇತೃತ್ವದ ಪರಿಸರ ಸೂಕ್ಷ್ಮ ಪ್ರದೇಶಗಳ ಅಧ್ಯಯನ ಸಮಿತಿಗೆ ಅವರು ಲಿಖಿತ ಅಹವಾಲು ಸಲ್ಲಿಸಿದ್ದಾರೆ.

ಕಸ್ತೂರಿ ರಂಗನ್ ವರದಿ ಆಧರಿಸಿ ಪಶ್ಚಿಮಘಟ್ಟ ವ್ಯಾಪ್ತಿಯ ಜನವಸತಿ ಪ್ರದೇಶಗಳನ್ನೂ ಪರಿಸರ ಸೂಕ್ಷ್ಮ ಪ್ರದೇಶಗಳ ವ್ಯಾಪ್ತಿಗೆ ಸೇರಿಸಿ ಕರಡು ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಕರಡು ಅಧಿಸೂಚನೆಯ ವಿರುದ್ಧ ರಾಜ್ಯ ವಿಧಾನಸಭೆಯೂ ನಿರ್ಣಯ ಅಂಗೀಕರಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ತನ್ನ ಅಭಿಪ್ರಾಯ ಸಲ್ಲಿಸಲು ರಾಜ್ಯ ಸರ್ಕಾರ ಇತ್ತೀಚೆಗೆ ಜಸ್ಟೀಸ್ ಡಿ. ಕುನ್ಹಾ ನೇತೃತ್ವದಲ್ಲಿ ಅಧ್ಯಯನ ಸಮಿತಿ ರಚಿಸಿದೆ.

ಸ್ಥಳೀಯರ ಜೀವ, ಹಕ್ಕುಗಳ ರಕ್ಷಣೆ ಮೊದಲ ಆದ್ಯತೆಯಾಗಲಿ: ಇಎಸ್‌ಎ (ESA) ಅಧ್ಯಯನ ಸಮಿತಿಗೆ ತಾಲೂಕಿನ ಜನರ ಪರವಾಗಿ ಸುದೀರ್ಘ ಅಹವಾಲು ಸಲ್ಲಿಸಿರುವುದಾಗಿ ಕೊಚರೇಕರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. “ಪಶ್ಚಿಮಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯ ಮತ್ತು ಪ್ರದೇಶ ಘೋಷಿಸುವ ಮುನ್ನ, ಅಲ್ಲಿ ವಾಸಿಸುವ ರೈತರು, ಅರಣ್ಯವಾಸಿಗಳು, ಬುಡಕಟ್ಟು ಹಾಗೂ ಪಾರಂಪರಿಕವಾಗಿ ಅರಣ್ಯಾಧಾರಿತ ಜೀವನ ನಡೆಸುತ್ತಿರುವ ಜನರ ಜೀವ ಮತ್ತು ಹಕ್ಕುಗಳನ್ನು ಸಂರಕ್ಷಿಸುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು” ಎಂದು ಒತ್ತಾಯಿಸಿದ್ದಾರೆ.

“ಈ ಹಿಂದೆ ನಡೆದ ಕೊಯ್ನಾ ಸೇರಿದಂತೆ ವಿವಿಧ ಆಣೆಕಟ್ಟೆಗಳ ದುರಂತಗಳು ಹಾಗೂ ವೈನಾಡು ಮತ್ತು ಉತ್ತರ ಕನ್ನಡ ಸೇರಿದಂತೆ ಹಲವೆಡೆ ಸಂಭವಿಸಿದ ಭೂಕುಸಿತ ದುರಂತಗಳಿಂದಾದ ಜೀವಹಾನಿ ಮತ್ತು ಪರಿಸರ ಹಾನಿ ಯೋಜನೆ ರೂಪಿಸುವವರಿಗೆ ಪಾಠವಾಗಬೇಕು. ಪಶ್ಚಿಮಘಟ್ಟದಲ್ಲಿ ಕಂಡುಬರುತ್ತಿರುವ ಭೂಸೀಳುವಿಕೆ, ಭೂಕುಸಿತ ಮತ್ತು ಭವಿಷ್ಯದಲ್ಲಿ ಯಾವುದೇ ಯೋಜನೆಗಾಗಿ ಸುರಂಗ ನಿರ್ಮಾಣಕ್ಕೆ ಸ್ಫೋಟಕ ಬಳಸುವುದರಿಂದ ಆಣೆಕಟ್ಟೆಗಳ ಸುರಕ್ಷತೆಗೆ ಧಕ್ಕೆ ಉಂಟಾಗಬಹುದು ಎಂಬ ವಿಜ್ಞಾನಿಗಳ ಬಹಿರಂಗ ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಘಟ್ಟದ ಕೆಳಗೆ ವಾಸಿಸುವ ಜನರ ಬದುಕು ಮತ್ತು ಜೀವಕ್ಕೆ ಅಪಾಯ ತರಬಲ್ಲ ಯಾವುದೇ ಬ್ರಹತ್ ಯೋಜನೆಗಳಿಗೆ ಈ ಭಾಗದಲ್ಲಿ ಸಂಪೂರ್ಣ ನಿಷೇಧ ಹೇರಬೇಕು” ಎಂದು ಅವರು ಅಧ್ಯಯನ ಸಮಿತಿಯ ಗಮನ ಸೆಳೆದಿದ್ದಾರೆ.

ಪ್ರಮುಖ ಮನವಿಗಳು ಮತ್ತು ಶಿಫಾರಸುಗಳ ಆಗ್ರಹ:

  • ಹಕ್ಕುಗಳ ಕಾನೂನುಬದ್ಧ ರಕ್ಷಣೆ: 2015ರ ಪೂರ್ವದ ಅರಣ್ಯ ಭೂಮಿ ಸಾಗುವಳಿದಾರರು ಸೇರಿದಂತೆ ಅರಣ್ಯ ಹಕ್ಕು ಕಾಯ್ದೆಯಡಿ ಕ್ಲೇಮು ಸಲ್ಲಿಸಿರುವ ಹಾಗೂ ಕಂದಾಯ ಮತ್ತು ಖಾಸಗಿ ಭೂಮಿ ಹೊಂದಿರುವ ಸ್ಥಳೀಯರ ಜೀವನೋಪಾಯಕ್ಕೆ ತೊಂದರೆಯಾಗದಂತೆ, ಅವರ ಹಕ್ಕುಗಳನ್ನು ಕಾನೂನುಬದ್ಧವಾಗಿ ರಕ್ಷಿಸಲು ಇಎಸ್‌ಎ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ದಾಖಲಿಸುವಂತೆ ಸಮಿತಿಯು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು.
  • ಜನವಸತಿ, ಮೂಲಸೌಕರ್ಯಕ್ಕೆ ವಿನಾಯಿತಿ: ಡಾ. ಕಸ್ತೂರಿ ರಂಗನ್ ಆಯೋಗದ ವರದಿಯಲ್ಲಿ ಗುರುತಿಸಲಾದ ಹಲವು ಪ್ರದೇಶಗಳನ್ನು ಈಗಾಗಲೇ ರಕ್ಷಿತ ಪ್ರದೇಶ, ಅಧಿಸೂಚಿತ ಅರಣ್ಯ ಹಾಗೂ ಪರಿಸರ ಸೂಕ್ಷ್ಮ ಪ್ರದೇಶವೆಂದು ಸರ್ಕಾರ ಘೋಷಿಸಿದೆ. ಪ್ರಚಲಿತ ನಿಯಮಗಳೇ ಜನಸಾಮಾನ್ಯರ ಬದುಕಿಗೆ ತೊಡಕಾಗಿವೆ. ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕೃಷಿ, ತೋಟಗಾರಿಕೆ ನೀರಾವರಿ, ಕುಡಿಯುವ ನೀರು ಪೂರೈಕೆ, ರಸ್ತೆ, ಆಸ್ಪತ್ರೆ, ಶಾಲೆ, ಕಾಲೇಜು ಮುಂತಾದ ಮೂಲಸೌಕರ್ಯಗಳ ನಿರ್ಮಾಣಕ್ಕೆ ಹಾಗೂ ಖಾಸಗಿ ಮತ್ತು 31-12-2015ರ ಪೂರ್ವದ ಅರಣ್ಯ ಭೂಮಿಯಲ್ಲಿ ಕೃಷಿ-ತೋಟಗಾರಿಕೆಯೊಂದಿಗೆ ಬದುಕು ಕಟ್ಟಿಕೊಂಡಿರುವ ಜನವಸತಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯ/ವ್ಯಾಪ್ತಿಯಿಂದ ಹೊರತುಪಡಿಸಬೇಕು.
  • ಪಂಪ್ಡ್ ಸ್ಟೋರೇಜ್ ಯೋಜನೆಗೆ ಸ್ಫೋಟಕ, ಸುರಂಗ ನಿಷೇಧ: ಪಶ್ಚಿಮಘಟ್ಟದ ಶರಾವತಿ ಕೊಳ್ಳ ಪ್ರದೇಶದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅಥವಾ ಅಲ್ಲಿನ ಜಲಾಶಯಗಳ 15 ಕಿ.ಮೀ. ವ್ಯಾಪ್ತಿಯಲ್ಲಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆಗಾಗಿ ಯಾವುದೇ ಸ್ಫೋಟಕಗಳನ್ನು ಬಳಸುವುದನ್ನು ಹಾಗೂ ಸುರಂಗ ನಿರ್ಮಾಣ ಮಾಡುವುದನ್ನು ನಿಷೇಧಿಸುವಂತೆ ಸಮಿತಿಯ ಮೂಲಕ ರಾಜ್ಯ ಸರ್ಕಾರವು ಕೇಂದ್ರದ ಗಮನ ಸೆಳೆಯಬೇಕು ಎಂದು ಚಂದ್ರಕಾಂತ ಕೊಚರೇಕರ ಮನವಿ ಮಾಡಿದ್ದಾರೆ.

About The Author

error: Content is protected !!