ಶಿರಸಿ: ಬ್ರಾಹ್ಮಣ ಸಮಾಜವು ತನ್ನ ಸ್ವಾಭಿಮಾನವನ್ನು ಕಾಪಾಡಿಕೊಂಡು, ಎಲ್ಲಾ ಸಮಾಜಗಳೊಂದಿಗೆ ಧರ್ಮ ಸಹಿಷ್ಣುತೆಯಿಂದ ಬೆರೆತು ಬದುಕುತ್ತಿರುವುದು ಅದರ ಪ್ರಮುಖ ವೈಶಿಷ್ಟ್ಯವಾಗಿದೆ ಎಂದು ಅಖಿಲ ಹವ್ಯಕ ಮಹಾಸಭೆಯ ಉಪಾಧ್ಯಕ್ಷ ಹಾಗೂ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಆರ್.ಎಂ. ಹೆಗಡೆ ಬಾಳೇಸರ ಅಭಿಪ್ರಾಯಪಟ್ಟರು.

ನಗರದ ಲಯನ್ಸ್ ಸಭಾಂಗಣದಲ್ಲಿ ಭಾನುವಾರ ಹವ್ಯಕ ಮಹಾಸಭೆ ಆಯೋಜಿಸಿದ್ದ ‘ಪ್ರತಿಬಿಂಬ’ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹವ್ಯಕ ಸಮಾಜವು ತನ್ನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡೇ ಇತರ ಸಮಾಜಗಳೊಂದಿಗೆ ಹೊಂದಾಣಿಕೆಯಿಂದ ಬದುಕುತ್ತಿರುವುದನ್ನು ಉಲ್ಲೇಖಿಸಿದರು. ಕೃಷಿ, ವೈದಿಕ, ಕಲೆ ಹಾಗೂ ಯಕ್ಷಗಾನ ಕ್ಷೇತ್ರಗಳಲ್ಲಿ ಹವ್ಯಕರ ಕೊಡುಗೆ ಅಪಾರವಾಗಿದ್ದು, ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಶಿರಸಿಯಲ್ಲಿ ಹವ್ಯಕ ಭವನ ಹಾಗೂ ವಿದ್ಯಾರ್ಥಿ ವಸತಿ ನಿಲಯದ ಅಗತ್ಯತೆಯನ್ನು ಒತ್ತಿಹೇಳಿದ ಅವರು, ಎಲ್ಲರ ಸಹಕಾರದಿಂದ ಈ ಕನಸು ಸಾಕಾರಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮಾಜ ಸೇವಕಿ ಹಾಗೂ ಲೇಖಕಿ ವೈಶಾಲಿ ವಿ.ಪಿ. ಹೆಗಡೆ ಅವರು, ಹವ್ಯಕರ ಸಂಖ್ಯೆ ಸುಮಾರು ಐದು ಲಕ್ಷದಷ್ಟಿದ್ದು, ಪ್ರಪಂಚದಾದ್ಯಂತ ಹರಡಿಕೊಂಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಗುರುತು ಮೂಡಿಸಿರುವ ಹವ್ಯಕರು, ಸಮುದಾಯದ ಒಗ್ಗಟ್ಟಿಗೆ ಮಹತ್ವ ನೀಡುತ್ತಿದ್ದಾರೆ ಎಂದು ಹೇಳಿದರು. ಅಖಿಲ ಹವ್ಯಕ ಮಹಾಸಭೆ ಸಮುದಾಯವನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲಯನ್ಸ್ ಅಧ್ಯಕ್ಷ ಪ್ರಭಾಕರ ಹೆಗಡೆ ಮಾತನಾಡಿ, ಲಯನ್ಸ್ ಭವನವು ಎಲ್ಲ ಸಮಾಜದವರಿಗೂ ಮುಕ್ತವಾಗಿದ್ದು, ಶಾಲಾ ಚಟುವಟಿಕೆಗಳಿಗೆ ಅಡಚಣೆ ಆಗದ ದಿನಗಳಲ್ಲಿ ಕಾರ್ಯಕ್ರಮಗಳಿಗೆ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಹಾಸಭೆಯ ಕಾರ್ಯದರ್ಶಿ ಪ್ರಶಾಂತ ಭಟ್ಟ ಮಲವಳ್ಳಿ, ನಿರ್ದೇಶಕರಾದ ಶಶಾಂಕ ಹೆಗಡೆ ಶೀಗೇಹಳ್ಳಿ, ಶ್ರೀಕಾಂತ ಭಟ್ಟ, ಜಿ.ಎಂ. ಭಟ್ಟ ಕಾಜಿನಮನೆ, ದೀಪಕ್ ಗೋಳಿಕೈ, ವಿ.ಎಂ. ಹೆಗಡೆ ಹಲಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಿಕ್ಷಕರಾದ ಡಿ.ಪಿ. ಹೆಗಡೆ ಹಾಗೂ ಗೀತಾಂಜಲಿ ಭಟ್ಟ ಕಾರ್ಯಕ್ರಮ ನಿರ್ವಹಿಸಿದರೆ, ಪ್ರಾಚಾರ್ಯ ಶಶಾಂಕ ಹೆಗಡೆ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ವಿವಿಧ ವಯೋಮಿತಿಯವರಿಗಾಗಿ ಸ್ಪರ್ಧೆಗಳು ಆಯೋಜಿಸಲಾಯಿತು. ಚಿಕ್ಕ ಮಕ್ಕಳಿಗೆ ಶ್ಲೋಕ ಪಠಣ, ಛದ್ಮವೇಷ ಹಾಗೂ ಬಣ್ಣ ತುಂಬುವ ಸ್ಪರ್ಧೆಗಳು ನಡೆದರೆ, ವಿದ್ಯಾರ್ಥಿಗಳಿಗೆ ಭಗವದ್ಗೀತೆ ಪಾಠ, ಚಿತ್ರಕಲೆ, ಏಕಪಾತ್ರಾಭಿನಯ, ಯೋಗಾಸನ ಸ್ಪರ್ಧೆಗಳು ಜರುಗಿದವು. ಹಿರಿಯರಿಗೆ ರಸಪ್ರಶ್ನೆ, ಆಶುಭಾಷಣ, ದೇಶಭಕ್ತಿಗೀತೆ, ಚರ್ಚೆ, ರಂಗೋಲಿ ಹಾಗೂ ಹವಿರುಚಿ ಸ್ಪರ್ಧೆಗಳು ನಡೆದವು. ಕರಕುಶಲ ವಸ್ತುಗಳ ಪ್ರದರ್ಶನವೂ ಗಮನ ಸೆಳೆಯಿತು.
ಹವ್ಯಕರು ಹೆಚ್ಚು ವಾಸವಾಗಿರುವ ಪ್ರದೇಶಗಳಲ್ಲಿ ಶಿರಸಿ ಪ್ರಮುಖವಾಗಿದ್ದು, ಇಲ್ಲಿ ಹವ್ಯಕ ಭವನ ಮತ್ತು ವಿದ್ಯಾರ್ಥಿ ವಸತಿ ನಿಲಯ ನಿರ್ಮಾಣದ ಅಗತ್ಯತೆಯ ಬಗ್ಗೆ ಮತ್ತೊಮ್ಮೆ ಒತ್ತಿಹೇಳಲಾಯಿತು.

More Stories
‘ಕನ್ನಡ ನುಡಿತೇರು–2026’ ಕಾರ್ಯಕ್ರಮ ಯಶಸ್ವಿ
ಶಿರಸಿ ಮೂಲದ ಅರ್ಚನಾ ಹೆಗಡೆಗೆ ಡಾಕ್ಟರೇಟ್ ಪದವಿ
ಶಿರಸಿಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಎರಡು ದಿನಗಳ ಮಹಾ ಪ್ರಶಿಕ್ಷಣ ಅಭಿಯಾನ