ಶಿರಸಿ: ಸಿದ್ಧಾಪುರದ ಒಡ್ಡೋಲಗ ರಂಗ ಪರ್ಯಟನ ಹಿತ್ತಲಕೈ ಇವರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯ ಯೋಜನೆಯಡಿ ನಿಸರ್ಗಪ್ರಿಯ ವಿರಚಿತ ಶುನಶ್ಯೇಪ ನಾಟಕವು ನಗರದ ರಂಗಧಾಮದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು.
ನಾಟಕ ಪ್ರದರ್ಶನಕ್ಕೆ ನೆಮ್ಮದಿ ಮುಖ್ಯಸ್ಥ ವಿ.ಪಿ. ಹೆಗಡೆ ವೈಶಾಲಿ ಉದ್ಘಾಟಿಸಿದರು. ಒಮಿ ಸಂಸ್ಥೆಯ ಮಧುಕೇಶ್ವರ್ ವಿ ಹೆಗಡೆ ಆಲ್ಮನೆ ಹಾಗೂ ಲೋಕಧ್ವನಿ ಸ್ಥಾನಿಕ ಸಂಪಾದಕ ನಾಗರಾಜ್ ಮತ್ತಿಗಾರ ಭಾಗವಹಿಸಿದ್ದರು. ವೈಶಾಲಿ ಅವರು ತಮ್ಮ ಮಾತಿನಲ್ಲಿ ಒಡ್ಡೋಲಗ ರಂಗತಂಡ ನಿರಂತರ ಗುಣಮಟ್ಟದ ಪ್ರಯೋಗವನ್ನು ನಡೆಸುತ್ತಿರುವುದನ್ನು ಶ್ಲಾಘಿಸಿದರು.

ಪ್ರಜ್ಞಾ ಹೆಗಡೆ ಸ್ವಾಗತಿಸಿದರು ಮತ್ತು ಸಹಕರಿಸಿದ ಎಲ್ಲಾ ಸಂಘಟನೆಗೂ ವಂದನೆ ಸಲ್ಲಿಸಿದರು.
ನಾಟಕದ ಕಥಾವಸ್ತು ಹರಿಶ್ಚಂದ್ರನ ಕಾಲದ್ದು ಕೃತಯುಗದ್ದು ಆದರೆ ಸಮಸ್ಯೆ ಈಗಿನದು. ಹರಿಶ್ಚಂದ್ರ ಮಹಾರಾಜನು ವರುಣ ಯಾಗ ಮಾಡಿ ಪುತ್ರನನ್ನು ಪಡೆಯುತ್ತಾನೆ. ಆದರೆ ವರುಣನಿಗೆ ಕೊಟ್ಟ ಮಾತಿನಂತೆ ಪುತ್ರನಿಗೆ 8 ವರ್ಷವಾದ ಬಳಿಕ ಮರಳಿ ಯಾಗ ಮಾಡಿ ಪುತ್ರನನ್ನು ಸಮರ್ಪಿಸಬೇಕಾದನ್ನು ವಿಳಂಬ ಮಾಡಿದ ಕಾರಣ ರಾಜನಿಗೆ ಜಲೋಧರ ರೋಗ ಹಾಗೂ ಕ್ಷಾಮಕ್ಕೆ ತತ್ತರಿಸಿ ಹೋಗುವ ಸಂದರ್ಭದಿಂದ ಪಾರಾಗುವ ಬಗೆಯೇ ಈ ನಾಟಕದ ಕಥಾವಸ್ತು. ಪ್ರಸ್ತುತ ನಾಟಕವನ್ನು ಮಂಜುನಾಥ್ ಎಲ್ ಬಡಿಗೇರ ಅವರು ನಿರ್ದೇಶನ ಹಾಗೂ ಭಾರ್ಗವ ಹೆಗಡೆ ಹೆಗ್ಗೋಡು ಇವರ ಸಂಗೀತ ಸಂಯೋಜನೆಯಲ್ಲಿ ಆಕರ್ಷಕವಾಗಿ ಮೂಡಿ ಬಂತು. ಸತ್ಯ ಶೋಧನೆ ಹಾಗೂ ಪ್ರಭುತ್ವದ ಚಕ್ರಾಧಿಪತ್ಯ ಹಾಗೂ ಬಡತನ ಹಸಿವು ಮನುಷ್ಯನನ್ನು ದಾರುಣ ಸ್ಥಿತಿಗೆ ತಲುಪಿಸುವ ಸನ್ನಿವೇಶಗಳು ಹೃದಯಸ್ಪರ್ಶಿ ಆಗಿದ್ದವು.
ರಂಗದ ಮೇಲೆ ಗಣಪತಿ ಬಿ ಹಿತ್ತಲಕೈ, ಪ್ರಶಾಂತ್ ವರದಾಮೂಲ, ಗಣಪತಿ ಹೆಗಡೆ ನಂದಿತಳೆ, ಪುಷ್ಪ ರಾಘವೇಂದ್ರ ಸಾಗರ, ಕೇಶವ ಕಿಬ್ಳೆ, ಮಾಧವ ಶರ್ಮ ಕಲಗಾರು, ಪ್ರಸಾದ್ ಹೆಗಡೆ, ನವೀನ್ ಕುಮಾರ್ ಕುಣಜಿ, ಮಾನ್ಯ ಪೂಜಾರಿ, ನೇಹಾ ದೇಶಭಂಡಾರಿ, ನಿಶಾ ದೇಶಭಂಡಾರಿ, ಸೂರ್ಯ, ವರುಣ್ ವಿವಿಧ ಪಾತ್ರಗಳಲ್ಲಿ ಜೀವ ತುಂಬಿದರು. ಸಂಗೀತ ನಿರ್ವಹಣೆಯಲ್ಲಿ ರಾಕೇಶ್ ಭಟ್, ರಂಗ ಸಜ್ಜಿಗೆ ಹಾಗೂ ಪ್ರಸಾದನ ಗುರುಮೂರ್ತಿ ವರದಾಮೂಲ, ಬೆಳಕಿನ ನಿರ್ವಹಣೆಯಲ್ಲಿ ಶ್ರೀಧರ್ ಭಾಗವತ, ತಾಂತ್ರಿಕ ನಿರ್ವಹಣೆಯಲ್ಲಿ ಮುರುಗೇಶ್ ಬಸ್ತಿಕೊಪ್ಪ ಕಾರ್ಯ ನಿರ್ವಹಿಸಿದರು.

More Stories
ಜನರ ಆರೋಗ್ಯ ಸಂರಕ್ಷಣೆಗೆ ನಿಸರ್ಗಮನೆ ಮಹತ್ವದ ಕೊಡುಗೆಯಿದೆ : ನ್ಯಾ. ಹುದ್ದಾರ
7ಕ್ಕೆ ಸ್ವರ ಲಯ ಸಂಗೀತ ಭೈಠಕ್
ಸಂಗೀತದ ನಾದದಲ್ಲಿ ಮಿಂದೇಳಿದ ವಾರ್ಷಿಕೋತ್ಸವ – ಕಲಾವಿದರಿಗೆ ಸನ್ಮಾನ