ಕುಮಟಾ : ತಾಲ್ಲೂಕಿನ ಬರ್ಗಿಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠವು ನಾಗನೆಲೆಯ ಕನ್ನಡ ಭಾರತಿ ಪ್ರಪಂಚ, ಕರ್ನಾಟಕ ಸಂಸ್ಕೃತ ಪರಿಷತ್, ಡಾ. ಗಜಾನನ್ ನಾಯಕ್ ಅಭಿಮಾನಿ ಬಳಗ, ಕರ್ನಾಟಕ ರಾಜ್ಯ ಬೋಧಕರ ಸಂಘ,ಬರ್ಗಿ ಪ್ರೌಢ ಶಾಲೆಯ ಶ್ರೀ ಘಟಬೀರ ಪ್ರಸಾದಿತ ಹಳೆಯ ವಿದ್ಯಾರ್ಥಿಗಳ ಸಂಘ, ತೊರ್ಕೆಯ ಆನಂದ ಕವರಿ ಪ್ರತಿಷ್ಠಾನ ಹಾಗೂ ಕರ್ನಾಟಕ ರಣಧೀರ ವೇದಿಕೆಯ ಸಯುಕ್ತ ಆಶ್ರಯದಲ್ಲಿ ಆಯೋಜಿಸಿದ “ಬರ್ಗಿ ಸಂಸ್ಕೃತೋತ್ಸವ” ದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಸಿರ್ಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರ ಕಚೇರಿಯ ವಿಷಯ ನಿರ್ವಾಹಕರಾದ ಬರ್ಗಿಯೂರಿನ ಸದಾಶಿವ ಸುಬ್ರಾಯ ನಾಯ್ಕರವರನ್ನು ” ವರದ ಯೋಧ ಯೋಗಿ ” ಅಭಿದಾನದೊಂದಿಗೆ ಅತ್ಯಂತ ಆತ್ಮೀಯವಾಗಿ ಗೌರವಿಸಲಾಯಿತು.
ಸದಾಶಿವ ನಾಯ್ಕರವರು ಎಳೆವೆಯಲ್ಲಿಯೇ ದೇಶಭಕ್ತಿಯ ಕೆಚ್ಚನ್ನು ಮೈಗೂಡಿಸಿಕೊಂಡು ಸೇನೆಯನ್ನು ಸೇರಿ ಸಾಹಸವನ್ನು ಮೆರೆದು ವಿಶ್ರಾಂತರಾದ ಬಳಿಕ ಶಿಕ್ಷಣ ಇಲಾಖೆಯಲ್ಲಿ ಅವಿಶ್ರಾಂತವಾಗಿ ಸಮರ್ಪಣಾ ಮನೋಭಾವದಿಂದ ದುಡಿದು,
ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕೃತದಲ್ಲಿನ ಅಭಿಮಾನದೊಂದಿಗೆ ಬದುಕನ್ನು ಕಟ್ಟಿಕೊಂಡಿದ್ದನ್ನು ಬರ್ಗಿ ಸಂಸ್ಕೃತೋತ್ಸವದ ಪ್ರಧಾನ ಸಂಘಟಕರಾದ ಸಂಸ್ಕೃತ ಅಧ್ಯಾಪಕ ಮಂಜುನಾಥ ಗಾಂವ್ಕರ್ ಬರ್ಗಿಯವರು ಶ್ಲಾಘಿಸಿದರು.
ಸನ್ಮಾನವನ್ನು ಸ್ವೀಕರಿಸಿದ ಸದಾಶಿವ ನಾಯ್ಕರವರು ಮಾತನಾಡಿ , ಹುಟ್ಟೂರಿನ ಸಂಸ್ಕೃತದ ಕಾರ್ಯಕ್ರಮದಲ್ಲಿ ತನಗೆ ಸಂದ ಗೌರವದ ಶ್ರೇಯಸ್ಸನ್ನು ಪ್ರಾಣದ ಹಂಗನ್ನು ತೊರೆದು ದೇಶದ ಗಡಿಯನ್ನು ಕಾಯುತ್ತಿರುವ ತನ್ನೆಲ್ಲ ಸೈನಿಕರಿಗೆ ಅರ್ಪಿಸಿರುವುದಾಗಿ ಭಾವುಕರಾಗಿ ನುಡಿದರು. ಅಲ್ಲದೇ ಬರ್ಗಿಯು ಸಂಸ್ಕೃತದ ಜಾಗೃತ ನೆಲವಾಗುತ್ತಿರುವುದಕ್ಕೆ ಮತ್ತು ಬರ್ಗಿಯಲ್ಲಿ ಸಂಸ್ಕೃತಿ ಪರವಾದ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುವುದಕ್ಕೆ ಊರವನಾಗಿ ತನಗೆ ಎಲ್ಲಿಲ್ಲದ ಅಭಿಮಾನದ ವಿಷಯವಾಗಿದೆ ಎಂದರು.
ಸದಾಶಿವ ನಾಯ್ಕರವರನ್ನು ಸನ್ಮಾನಿಸಿದ “ಕನ್ನಡ ಭಾರತಿ ಪ್ರಪಂಚ” ದ ಸಂಚಾಲಕರಾದ ನಾರಾಯಣ ನಾಗು ನಾಯಕರವರು ತನ್ನ ಒಡನಾಡಿಯದ ಸ್ನೇಹಜೀವಿಯಾಗಿರುವ ತತ್ವ ನಿಷ್ಠರಾದ ಸದಾಶಿವ ನಾಯಕರವರನ್ನು ಸನ್ಮಾನಿಸುತ್ತಿರುವುದು ಸಜ್ಜನಿಕೆಗೆ ಸಲ್ಲಿಸುತ್ತಿರುವ ಗೌರವ ಎಂದು ಅಭಿಮಾನದಿಂದ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತದ ನಿಕಟಪೂರ್ವ ಸದಸ್ಯರಾದ ಗಾಯತ್ರಿ ಗೌಡ, ಪ್ರದೀಪ ನಾಯಕ ದೇವರಬಾವಿ, ತಾಲ್ಲೂಕಾ ಪಂಚಾಯತ್ ಮಾಜಿ ಅಧ್ಯಕ್ಷೆ ವಿಜಯಾ ಪಟಗಾರ, ಬರ್ಗಿ ಪ್ರೌಢ ಶಾಲಾ ಹಳೆಯ ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ ಜೈರಾಮ್ ನಾಯ್ಕ, ಕರ್ನಾಟಕ ರಣಧೀರ ವೇದಿಕೆಯ ಕುಮಟಾ ತಾಲ್ಲೂಕಾ ಘಟಕದ ಅಧ್ಯಕ್ಷ ಮಿರ್ಜಾಾನಿನ ಕನ್ನಡದ ಸಮೀರರು ಹಾಗೂ ನಿವೃತ್ತ ಆರಕ್ಷಕ ಉಪನಿರೀಕ್ಷಕ ಸುರೇಶ ನಾಯಕ ಮೊದಲಾದವರಿದ್ದರು.

More Stories
ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ IT Notice – ತೆರಿಗೆ ಮೇಲ್ಮನವಿಯಲ್ಲಿ ಜಯ
ಬರ್ಗಿಯಲ್ಲಿ ವಿಶ್ವ ಕ್ರಿಕೆಟ್ ಕೋಚರ್ ರಾಘವೇಂದ್ರ ದಿವಗಿ ತಂದೆಗೆ ಸನ್ಮಾನ
ಆನಂದಾಶ್ರಮ ಪ್ರೌಢಶಾಲೆಯ ಅಮೋಘ ಸಾಧನೆ